ಭಗತಸಿಂಗ್ ರ ವಿಚಾರಗಳು ಮೈ ಮೇಲಿನ ರೋಮಗಳನ್ನೇ ಎದ್ದು ನಿಲ್ಲಿಸುತ್ತವೆ; ಮೋಹನ್ ಐನಾಪುರ
ಚಿಂಚೋಳಿ,ಸೆ.28- ಭಗತ ಸಿಂಗ್ ರ ವಿಚಾರಗಳನ್ನು ಕೇಳಿದಾಗ ನಮಗೆ ಅರಿವಿಲ್ಲದಂತೆಯೇ ಮೈ ಮೇಲಿನ ರೋಮಗಳನ್ನು ಎದ್ದು ನಿಲ್ಲುವಂತೆ ಮಾಡುತ್ತವೆ ಅಂತಹ ತಾಕತ್ತು ಭಗತ ಸಿಂಗ್ ರ ವಿಚಾರಗಳಲ್ಲಿ ಮತ್ತು ಅವರ ಕುರಿತಾದ ಇತಿಹಾಸದಲ್ಲಿದೆ. ಯುವಕರು ಭಗತ್ ಸಿಂಗರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ದೇಶ ಮತ್ತು ರಾಷ್ಟ್ರದ ಬಗೆಗೆ ತನ್ನಿಂದ ತಾನೇ ಅಭಿಮಾನ ಮೂಡುತ್ತದೆ ಎಂದು ಮೋಹನ್ ಐನಾಪುರ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಹೋಬಳಿ ಘಟಕವಾದ ಐನಾಪುರ ಗ್ರಾಮದಲ್ಲಿ ಇಂದು ಆಚರಿಸಿದ ಭಗತ್ ಸಿಂಗರ ಜಯಂತಿಯನ್ನು ಕುರಿತು ಮಾತನಾಡಿದ ಅವರು, ಭಗತ್ ಸಿಂಗ ಒಬ್ಬ ಅಪ್ಪಟ ದೇಶ ಭಕ್ತ, ರಾಷ್ಟ್ರ ಪ್ರೇಮಿಯಾಗಿದ್ದರು ದೇಶದ ಸಲುವಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದಷ್ಟೇ ಅಲ್ಲದೆ ಅವರು ಬದುಕಿರುವವರೆಗೂ ಕ್ರಾಂತಿಕಾರಿಯಾದಂತಹ ಹೋರಾಟ ಜೀವನವನ್ನು ಮಾಡಿದರು. ಇಂದು ಯುವಕರಲ್ಲಿ ರಾಷ್ಟ್ರ ಪ್ರೇಮ ಕಡಿಮೆಯಾಗುತ್ತಿದೆ.
ಭಗತ್ ಸಿಂಗರಂತಹ ಒಬ್ಬ ರಾಷ್ಟಪ್ರೇಮಿಯ ಇತಿಹಾಸವನ್ನು,ವಿಚಾರಗಳನ್ನು ನಾವು ತಿಳಿದುಕೊಂಡಿದ್ದೆ ಆದರೇ, ರಾಷ್ಟ್ರ ಪ್ರೇಮ ಅನ್ನುವುದು ನಮಗೆ ಗೊತ್ತಿಲ್ಲದಂತೆ ತನ್ನಿಂದ ತಾನೇ ನಮ್ಮಲ್ಲಿ ಹುಟ್ಟಿಕೊಳ್ಳುತ್ತದೆ. ಅವರು ರಾಷ್ಟ್ರಕ್ಕಾಗಿ ಮಾಡಿದಂತಹ ತ್ಯಾಗ ಮತ್ತು ಬಲಿದಾನವನ್ನು ಎಷ್ಟೇ ವರ್ಷಗಳು ಕಳೆದರೂ ಮರೆಯುವುದಕ್ಕಾಗುವುದಿಲ್ಲ ಅವೆಲ್ಲವೂ ಇತಿಹಾಸದಲ್ಲಿ ಹಾಸು ಹೊಕ್ಕಾಗಿವೆ ಎಂದರು.
ಬಳಿಕ ರೈತ ಪರ ಹೋರಾಟಗಾರ ಶಿವಾನಂದ ಮಾಲಿ ಪಾಟೀಲ್ ಮಾತನಾಡಿ, ಇಂದಿನ ಯುವಕರಿಗೆ ಭಗತ್ ಸಿಂಗ ನಂತಹ ದೇಶಭಕ್ತರು, ಸಾಧಕರು ಜೀವನದಲ್ಲಿ ಮಾದರಿಯಾಗಿರಬೇಕು ಆದರೇ, ಇತ್ತೀಚಿನ ದಿನಗಳಲ್ಲಿ ಸಿನಿಮಾ ಪರದೆಯ ಮೇಲೆ ನಟನೆ ಮಾಡುವ ನಟರನ್ನೇ ಮಾದರಿಯನ್ನಾಗಿಟ್ಟುಕೊಳ್ಳುತ್ತಿರುವುದು ವಿಪರ್ಯಾಸ ಎಂದರು.
ಈ ಸಂದರ್ಭದಲ್ಲಿ ಉಮೇಶ ತೇಳಕೇರಿ, ಸಂತೋಷ ಹಲಗಿ, ಪಪ್ಪು ಮೇಲ್ಕೇರಿ, ವೈಜಿನಾಥ, ಮಸ್ತಾನ್ ಸೇರಿದಂತೆ ಇನ್ನಿತರ ಯುವಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು