ನಾಡು ನುಡಿ ರಕ್ಷಣೆಗೆ ಕಂಕಣಬದ್ಧರಾಗಿ
ಶಿರಹಟ್ಟಿ,ಜು23 : ಕನ್ನಡ ನಾಡು ನುಡಿ ನೆಲ ಜಲಕ್ಕಾಗಿ ಕಂಕಣಬದ್ಧರಾಗಬೇಕೆಂದು ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.
ಶಿರಹಟ್ಟಿ ತಾಲೂಕು ಬೆಳ್ಳಟ್ಟಿ ಗ್ರಾಮದ ಎಪಿಎಮ್‍ಸಿ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ನೂತನ ತಾಲೂಕು ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸೇವಾದಿಕ್ಷಾ ಸಮಾರಂಭದಲ್ಲಿ ಪಾಲ್ಗೊಂಡು ಅವರಿಗೆ ಪ್ರತಿಜ್ಞಾ ವಿಧಿ ಭೋಧಿಸಿ ಮಾತನಾಡಿದರು.
ಮುಂಬರುವ ದಿನಗಳಲ್ಲಿ ಕಸಾಪ ಸಮ್ಮೇಳನವನ್ನು ತಾಲೂಕು ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಶಿರಹಟ್ಟಿ ತಾಲೂಕಿನಲ್ಲಿ ನಡೆಸುವುದಾದರೆ ಚರ್ಚಿಸಿ, ಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಎಸ್.ಬಿ.ಹೊಸೂರ, ಎರಡುವರೆ ವರ್ಷಗಳ ಕಾಲ ಕನ್ನಡ ತಾಯಿಯ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ರಾಜ್ಯ ಮತ್ತು ಜಿಲ್ಲಾ ಕಸಾಪಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಮಾಜಿ ಶಾಸಕರಾದ ಜಿ.ಎಸ್.ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಪ್ಪ ಲಮಾಣಿ ಮಾತನಾಡಿ,ಇಡಿ ಜಗತ್ತಿನಲ್ಲಿ ಅತಿ ಸುಂದರ ಭಾಷೆ ಕನ್ನಡ ಎಂಬುವುದು ಸಾಬೀತಾಗಿದೆ. ಇಂತಹ ಅದ್ಭುತ ಭಾಷೆ ನಮಗೆಲ್ಲ ಮಾತೃಭಾಷೆ ಆಗಿರುವುದು ಹೆಮ್ಮೆಯ ವಿಷಯ. ಅಧುನಿಕ ಜಗತ್ತಿನಲ್ಲಿ ಬಾಳಲು ಇತರ ಬಾಷೆಗಳ ಕಲಿಕೆ ಅನಿವಾರ್ಯ, ಹಾಗಂತ ಕನ್ನಡ ಬಾಷೆಯ ಮೇಲಿನ ಪ್ರೀತಿ ಕಡಿಮೆ ಆಗಬಾರದು. ಕನ್ನಡ ಬಾಷೆಯ ಮೇಲಿನ ನಮ್ಮ ಪ್ರೀತಿ ವಿಶ್ವಾಸ ಸಮ್ಮೇಳನಕ್ಕೆ ಮೀಸಲಾಗದೆ, ನಿತ್ಯ ಬಳಕೆಯಲ್ಲಿ ಹಾಸು ಹೊಕ್ಕಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ರಾಮಲಿಂಗೇಶ್ವರ ಮಠದ ಬಸವರಾಜ ಸ್ವಾಮಿಜಿಗಳು ಆಶೀರ್ವದಿಸಿದರು.
ಶಾಸಕ ಡಾ. ಚಂದ್ರು ಲಮಾಣಿ ಕಾರ್ಯಕ್ರಮ ಉದ್ಘಾಟಿಸಿ ಕಸಾಪ ಸಭಾಭವನದ ನಿರ್ಮಾಣಕ್ಕೆ ಕಂಕಣ ಬಧ್ದರಾಗಿರುವುದಾಗಿ ಹೇಳಿದರು. ನೂತನ ತಾಲೂಕು ಅಧ್ಯಕ್ಷ ನವೀನಕುಮಾರ ಅಳವಂಡಿ, ಲಕ್ಷ್ಮೇಶ್ವರ ತಾಲೂಕು ಕಸಾಪ ಅಧ್ಯಕ್ಷ ಈಶ್ವರ ಮೇಡ್ಲೇರಿ, ಬೆಳ್ಳಟ್ಟಿ ಗ್ರಾಪಂ ಅಧ್ಯಕ್ಷ ರಮೇಶ ನಿರ್ವಾಹಣಶೆಟ್ಟರ, ಎಸ್.ಬಿ.ಮಹಜನಶೆಟ್ಟರ, ಹುಮಾಯೂನ ಮಾಗಡಿ, ಶಿವನಗೌಡ್ರ ಪಾಟೀಲ, ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ತಿಮ್ಮರಡ್ಡಿ ಅಳವಂಡಿ, ಎಮ್.ಕೆ.ಲಮಾಣಿ, ಗೀರೀಷ ಕೊಡಬಾಳ, ಹೆಚ್.ಆರ್.ಬೆನಹಾಳ ಸತೀಷ ದೇಶಪಾಂಡೆ, ಮಂಜುನಾಥ ಘಂಟಿ, ರಾಘವೇಂದ್ರ ಇಚ್ಚಂಗಿ, ಫಕ್ಕಿರೇಶ ಕುಳಗೇರಿ, ಬೆಳ್ಳಟ್ಟಿ ಗ್ರಾಪಂ ಸದಸ್ಯರು, ಕಸಪಾ ಆಜೀವ ಸದಸ್ಯರು ಉಪಸ್ಥಿತರಿದ್ದರು.