ಗುರಿ ಸಾಧನೆಯೆಡೆಗೆ ಮುಖ ಮಾಡಿ
ಲಕ್ಷ್ಮೇಶ್ವರ,ಜು23: ಪ್ರಾಪಂಚಿಕ ಜ್ಞಾನ ಹಾಗೂ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ದೇಶವನ್ನು ಕಟ್ಟುವ ಕೆಲಸದಲ್ಲಿ ಸಹಕಾರಿಯಾದಲ್ಲಿ ಮಾತ್ರ ವಿದ್ಯಾರ್ಥಿಗಳು ಪಡೆದಂತಹ ಪದವಿಗಳಿಗೆ ಇನ್ನೂ ಹೆಚ್ಚಿನ ಮೆರಗು ಸಿಗಲಿದೆ, ಉನ್ನತ ಗುರಿಯನ್ನು ಹೊಂದಿ ಸಾಗಿದಲ್ಲಿ ಸಾಧನೆ ಮಾಡುವದು ಸಾಧ್ಯ ಎಂದು ಬಿಸಿಎನ್ ವಿದ್ಯಾಸಂಸ್ಥೆಯ ನಿರ್ದೇಶಕ ಪ್ರಶಾಂತ ನೆಲವಿಗಿ ಹೇಳಿದರು.
ಅವರು ಪಟ್ಟಣದ ಬಿಸಿಎನ್ ಪದವಿ ಕಾಲೇಜಿನ ಸಭಾಂಗಣದಲ್ಲಿ ಬಿಸಿಎನ್ ವಿಜ್ಞಾನ, ವಾಣಿಜ್ಯ ಪದವಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉನ್ನತ ಶಿಕ್ಷಣ ಅಥವಾ ಉದ್ಯೋಗದೊಂದಿಗೆ ತಮ್ಮ ಜೀವನದಲ್ಲಿ ಯಶಸ್ಸು ಪಡೆಯಲು ತಮಗೆ ದೊರೆತ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಜೀವನಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ಸಾಧ್ಯವಿದೆ, ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಈ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ ಅವರು ಮಾತನಾಡಿ ವಿದ್ಯೆಯೊಂದಿಗೆ ಸಮಗ್ರ ಚಟುವಟಿಕೆಗಳು ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ಗಮನಹರಿಸಿ ಮುಂದಿನ ಭವಿಷ್ಯವನ್ನು ಉಜ್ವಲವನ್ನಾಗಿ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕು ನಡೆಸುವಂತಾಗಲಿ, ಜೀವನದಲ್ಲಿ ಯಶಸ್ಸು ಗಳಿಸಲು ನಿರಂತರ ಪ್ರಯತ್ನ ಹಾಗೂ ಗುರಿ ಬಹಳ ಮುಖ್ಯ. ಪ್ರಯತ್ನಿಸಿ ಸೋಲುವುದರಿಂದ ನಮ್ಮ ತಪ್ಪಿನ ಅರಿವಾಗುತ್ತದೆ. ಸೋತಾಗ ಕುಗ್ಗದೆ ಪ್ರಯತ್ನ ಮುಂದುವರೆಸಿ ಜೀವನದಲ್ಲಿ ಸಾರ್ಥಕತೆಯನ್ನು ಕಾಣಬೇಕು ಎಂದು ಹೇಳಿದ ಅವರು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಉತ್ತಮ ಫಲಿತಾಂಶ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ಕಡೆಗೆ ಗಮನಹರಿಸಿ ಮುಂದಿನ ನಿಮ್ಮ ಬದುಕನ್ನು ಉಜ್ವಲವನ್ನಾಗಿ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳಾದ ಭವ್ಯ, ಕಾವ್ಯ, ದರ್ಶನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ಡಿ.ಎಸ್.ಪ್ಯಾಟಿ. ಪತ್ರಕರ್ತ ದಿಗಂಬರ ಪೂಜಾರ ಉಪನ್ಯಾಸಕರಾದ ಖುಷಾ ಅರಳಿ, ಶಶಾಂಕ, ಮೇಘಾ ವಿ., ಸುಧಾರಾಣಿ, ವಿದ್ಯಾ, ರಮೇಶ ಗಿಣಿ, ಉಪಸ್ಥಿತರಿದ್ದರು, ಉಪನ್ಯಾಸಕ ಮಂಜುನಾಥ ಬಂಡಿವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಶಾರದಾ ಮಾಂಡ್ರೇ ಸ್ವಾಗತಿಸಿದರು, ಆಶಿಯಾ ಕಮಡೊಳ್ಳಿ ವಂದಿಸಿದರು, ಚೈತ್ರಾ ಮುಳಗುಂದ ನಿರೂಪಿಸಿದರು. ಪದವಿ ತರಗತಿಯ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು.