ಆದಿಮ ಕೇಂದ್ರದಲ್ಲಿ ನೆಲ,ಜಲ-ದೇಶ,ಭಾಷೆ ಜಾಗೃತಿ
ಕೋಲಾರ,ಜು.೨೩- ಆದಿಮ ಕೇಂದ್ರ ನೆಲ ಜಲ ದೇಶ ಭಾಷೆಗೆ ಸಂಬಂಧಿಸಿ ಸಮಾಜವನ್ನು ಜಾಗೃತಿಗೊಳಿಸುವ ಕೆಲಸದಲ್ಲಿ ತೊಡಗಿದೆ. ಈ ಕೇಂದ್ರಕ್ಕೆ ನನ್ನನ್ನು ಡಾ. ಉಮರ್ ಅವರು ಕರೆ ತಂದರು. ಇಲ್ಲಿ ಈ ಬೆಟ್ಟದ ಮೇಲೆ ಇಂತಹ ಸುಂದರ ವಾತಾವರಣ ನಿರ್ಮಿಸಿರುವುದು ಅದ್ಭುತವೇ ಸರಿ. ಸಂಸ್ಕೃತಿ ಚಿಂತನೆಯೊಂದಿಗೆ ನಾಟಕ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜವನ್ನು ಜಾಗೃತಿಗೊಳಿಸುತ್ತಿದೆ. ನಾವು ಸದಾ ಆದಿಮ ಕೇಂದ್ರದೊಂದಿಗೆ ಇರುತ್ತೇವೆಂದು ಬೀಜದಕಟ್ಟೆ ಅಭಿಮಾನಿಗಳ ಬಳಗ ಬೆಂಗಳೂರು ಅಧ್ಯಕ್ಷ ಬಿ. ನಟರಾಜು ತಿಳಿಸಿದರು.
ನಗರ ಹೊರವಲಯದ ತೇರಹಳ್ಳಿ ಬೆಟ್ಟದ ಶಿವಗಂಗೆಯ ಆದಿಮ ಕೇಂದ್ರದಲ್ಲಿ ಜು,೨೧ರ ಭಾನುವಾರ ಆಯೋಜಿಸಿದ್ದ ೨೦೭ನೇ ಹುಣ್ಣಿಮೆ ಹಾಡು ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಉಮ್ಮರ್ ಬೀಜದಕಟ್ಟೆ ಮಾತನಾಡಿ, ದ.ರಾ.ಬೇಂದ್ರೆಯವರ ಕವನ ಸಾಲುಗಳೊಂದಿಗೆ ಮಾತು ಆರಂಭಿಸಿ ಅಜ್ಞಾನವೆಂಬ ಕತ್ತಲಿಂದ ಬೆಳಕಿನತ್ತ ತಂದ ಗುರುಗಳಿಗೆ ಶರಣು. ಇಂದು ಗುರು ಪೌರ್ಣಿಮಿ ಎಲ್ಲರಿಗೂ ಶುಭಾಶಯಗಳು. ದೂರದ ಮಂಗಳೂರಿನ ಬಳಿ ಇರುವ ಒಂದು ಸಣ್ಣ ಹಳ್ಳಿ ಬೀಜದ ಕಟ್ಟೆ. ಅಲ್ಲಿನ ಸಮಾನ ಮನಸ್ಕರು ಕೂಡಿ ಕಟ್ಟಿಕೊಂಡಿರುವ ಅಭಿಮಾನಿಗಳ ಬಳಗ ಬೆಂಗಳೂರು ನಗರ ಹಾಗೂ ಸುತ್ತಮುತ್ತಾ ವಿವಿಧ ರೀತಿಯ ಸಮಾಜಸೇವೆಗಳು ಮಾಡುತ್ತಲೇ ಬಂದಿದೆ ಎಂದು ಹೇಳಿದರು.
ಪರಸ್ಪರ ಮನುಷ್ಯ ಮನುಷ್ಯರ ನಡುವೆ ಪ್ರೀತಿ, ವಿಶ್ವಾಸ ಬೆಳೆಸಿಕೊಳ್ಳಬೇಕು ಆಗ ಮಾತ್ರ ಮನುಷ್ಯ ಸ್ವತಂತ್ರವಾಗಿ ಬದುಕು ನಡೆಸಲು ಸಾಧ್ಯವಾಗುತ್ತದೆ. ಎಂದವರು ಕುವೆಂಪುರವರ ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಎಂದು ತಮ್ಮ ಮಾತಿಗೆ ವಿರಾಮ ನೀಡಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕೆ.ವಿ.ನಾಯಕ (ಅಮಾಸ) ಮಾತನಾಡಿ, ನಾನು ಅಪ್ಪೆಪಾರಿಯಾಗಿ ಓಡಾಡಿಕೊಂಡಿದ್ದವ. ನನ್ನನ್ನು ಈ ಆದಿಮ ನೆಲ ಒಬ್ಬ ಮನುಷ್ಯನಾಗಿ, ಒಬ್ಬ ಕಲಾವಿದನಾಗಿ ರೂಪಿಸಿ ನಿಲ್ಲಿಸಿದೆ.
ಕಾರ್ಯಕ್ರಮ ನಿರೂಪಣೆ ಗುಂಡಪ್ಪ ದೇವಿಕೇರಿ ಮಾಡಿದರೆ ಸ್ವಾಗತ ಶಿಕ್ಷಕ, ಕಲಾವಿದ ಅಮಿತ್ ನೆರವೇರಿಸಿಕೊಟ್ಟರು. ಕೆ.ವಿ.ನಾಯಕ (ಅಮಾಸ) ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ಆಯ್ಕೆ ಆಗಿರುವುದಕ್ಕಾಗಿ ಆದಿಮ ಸನ್ಮಾನಿಸಿ ಗೌರವಿಸಿತು. ಅವರ ಕಿರು ಪರಿಚಯ ನಾವೆಂಕಿ ಕೋಲಾರ ನಡೆಸಿಕೊಟ್ಟರು. ಕನ್ನಡ ಕೋಗಿಲೆ ಉಮಾ ವೈ.ಜಿ. ಆದಿಮ ಆಶಯಗೀತೆ ಹಾಡಿದರು, ಮಂಜುಳ ಕೊಂಡರಾಜನಹಳ್ಳಿ ಭಾವಗೀತೆ ಹಾಡಿದರು, ಮಾರುತಿ ಹಾಗೂ ತಂಡ, ಸಂವಾದ ವಿದ್ಯಾರ್ಥಿಗಳು ಹೋರಾಟದ ಗೀತೆಗಳನ್ನು ಹಾಡಿದರು.
ವಿಶ್ವರಂಗ ತಂಡ ಅರ್ಪಿಸಿದ ತಪ್ತ ಏಕ ವ್ಯಕ್ತಿ ನಾಟಕ ಕಂಡಾಯದ ಸಿದ್ದಪ್ಪಾಜಿ ಜನಪದ ಕತೆಯ ಹಾಡಿಕೆಯೊಂದಿಗೆ ಅರಂಭವಾಗುತ್ತದೆ. ನಾಟಕದಲ್ಲಿ ಪ್ರಸ್ಥಾಪಿಸಲ್ಪಡುವ ಕಥಾವಸ್ತು ಇವತ್ತಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಕ್ಕಳು ಮತ್ತು ತಂದೆ ಯಾವ ರೀತಿಯ ವೇದನೆಗಳನ್ನು ಅನುಭವಿಸುತ್ತಿದ್ದಾರೆ. ಅದರ ವಿವಿಧ ಮುಖಗಳು ಮತ್ತು ಸಂದರ್ಭಗಳು ಏಕವ್ಯಕ್ತಿ ಮೂಲಕ ಹಲವು ಪಾತ್ರಗಳು ರಂಗದ ಮೇಲೆ ಪ್ರೇಕ್ಷಕರೆದುರು ಮುಖಾಮುಖಿ ಆಗುತ್ತವೆ.
ಅಚ್ಚುಕಟ್ಟಾಗಿ ಹೆಣೆದಿರುವ ನಾಟಕಕಾರ ಶಿವು ಶಿರಾದಡು ಕತೆಗೆ ಪಾತ್ರಧಾರಿ ವಿಶ್ವನಾಥ್ ಸ್ವಾಮಿ ಹೆಚ್. ಎಮ್. ರಂಗದ ಮೇಲೆ ಅಭಿನಯ, ಸಂಭಾಷಣೆ ಅತ್ಯುತ್ತಮವಾಗಿ ಮೂಡಿ ಬಂತು. ಇದುವರೆಗೆ ಆದಿಮ ಕೇಂದ್ರದಲ್ಲಿ ಪ್ರದರ್ಶಿಸಲ್ಪಟ್ಟ ಉತ್ತಮ ಏಕವ್ಯಕ್ತಿ ನಾಟಕಗಳ ಪೈಕಿ ತಪ್ತ ನಾಟಕವೂ ಒಂದಾಗಿದೆ.
ಶಿಕ್ಷಕರಾದ ರವೀಂದ್ರ ಪ್ರಸಾದ್ , ಅಮಿತ್ ಉತ್ತರ ವಿಶ್ವವಿದ್ಯಾಲಯದ ವಿಧ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಕಲಾಭಿಮಾನಿಗಳು ನಾಟಕ ವೀಕ್ಷಿಸಿ ಅಭಿನಂದಿಸಿ ಪ್ರತಿಕ್ರಿಯೆಗಳನ್ನು ಹಂಚಿಕೊಂಡರು.
ಬೀಜದಕಟ್ಟೆ ಅಭಿಮಾನಿಗಳ ಬಳಗ ನೆನಪಿನ ಫಲಕ ನೀಡಿ ಅಭಿನಂದಿಸಿದರು.
ನಾಟಕ ರಚನೆ ಶಿವು ಶಿರಾದಡು, ಸಹಾಯ ವಿದ್ಯಾರಾಣಿ ಎ.ಎನ್. ಸಂಗೀತ ಜಗದೀಶ್ ಆರ್, ನಿರ್ದೇಶನ ವಿನ್ಯಾಸ ಮಧು ಎಮ್, ರಂಗದ ಮೇಲೆ ವಿಶ್ವನಾಥ್ ಸ್ವಾಮಿ. ಹೆಚ್.ಎಂ. ಕಾರ್ಯಕ್ರಮದಲ್ಲಿ ಗಂಗನಘಟ್ಟ ವೆಂಕಟಸ್ವಾಮಿ, ಹ ಮಾ ರಾಮಚಂದ್ರ, ಡಾ. ಮುರಳಿ, ಆನೇಕಲ್ ಭವ್ಯ, ಶಶಿ ಬೆಂಗಳೂರು ಹಾಗೂ ಕಲಾವಿದರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.