ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೋಚಿಮುಲ್ ಅಧ್ಯಕ್ಷರಿಗೆ ಮನವಿ
ಕೋಲಾರ,ಜು,೨೩-ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೋಲಾರ-ಚಿಕ್ಕಬಳ್ಳಾಪುರ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಪದಾಧಿಕಾರಿಗಳು ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ವಿಟ್ಟಪ್ಪನಹಳ್ಳಿ ವೆಂಕಟೇಶ್ ಮಾತನಾಡಿ, ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ನೀಡುತ್ತಿದ್ದ ಪ್ರೋತ್ಸಾಹ ಧನದಲ್ಲಿ ಯಾವುದೇ ಮಾಹಿತಿ ನೀಡದೆ ಶೇ.೧೦ ಟಿ.ಡಿ.ಎಸ್ ಎಂದು ಹೇಳಿ ಕಡಿತ ಮಾಡಿರುವ ಹಣವನ್ನು ಈ ಕೂಡಲೇ ಸಿಬ್ಬಂದಿ ಖಾತೆಗಳಿಗೆ ಜಮೆ ಮಾಡಬೇಕೆಂದು ಆಗ್ರಹಿಸಿದರು.
ಒಕ್ಕೂಟದಿಂದ ಸಂಘಗಳಿಗೆ ನೀಡುವ ವಾರದ ಹಾಲಿನ ಬಿಲ್ಲಿನ ಒಟ್ಟು ಮೊತ್ತದ ಮೇಲೆ ಈಗಾಗಲೇ ಟಿ.ಡಿ.ಎಸ್ ಅನ್ನು ಕಟಾವು ಮಾಡುತ್ತಿದ್ದು, ಮತ್ತೆ ಸಿಬ್ಬಂದಿ ಪ್ರೋತ್ಸಾಹ ಧನದ ಹಣಕ್ಕೆ ೧೦% ಟಿ.ಡಿ.ಎಸ್ ಕಡಿತಗೊಳಿಸಲು ಕಾನೂನಿನಲ್ಲಿ ಅವಕಾಶವಿದೆಯೇ ಎನ್ನುವ ಬಗ್ಗೆ ಕೂಡಲೇ ನಮಗೆ ಸಂಪೂರ್ಣ ದಾಖಲೆ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಉತ್ಪಾದಕರಿಗೆ ನೀಡುತ್ತಿರುವ ಹಾಲು ಖರೀದಿ ದರ ಈಗಾಗಲೇ ೨ ರೂ ಕಡಿತಗೊಳಿಸಿದ್ದು, ಉತ್ಪಾದಕರಿಗೆ ಬಹಳ ತೊಂದರೆಯುಂಟಾಗುತ್ತಿದೆ. ಇದರಿಂದ ಹೈನು ರಾಸುಗಳನ್ನು ರೈತರು ಮಾರಾಟ ಮಾಡುತ್ತಿದ್ದಾರೆ. ಇದರ ಪರಣಾಮವಾಗಿ ಹಾಲು-ಉತ್ಪಾದನೆಯು ಗಣನೀಯವಾಗಿ ಕಡಿಮೆಯಾಗುತ್ತಿದೆ. ಆದಕಾರಣ ಹಾಲಿನ ದರವನ್ನು ಕನಿಷ್ಠ ೩೫ ರೂಗಳಿಗೆ ಏರಿಕೆ ಮಾಡಲು ಕ್ರಮಕೈಗೊಳ್ಳಬೇಕೆಂದು ಕೋರಿದರು.
ಸಂಘಗಳಿಂದ ಒಕ್ಕೂಟಕ್ಕೆ ಹಾಲು ಮಾರಾಟದ ಹಣವು ಒಕ್ಕೂಟದ ಕಡೆಗೆ ೩ ವಾರದ ಬಿಲ್ಲು ಇದೆ. ಆದರೆ ಒಕ್ಕೂಟದಿಂದ ವಾರಕ್ಕೊಮ್ಮೆ ಸಮಯಕ್ಕೆ ಸರಿಯಾಗಿ ಸಂಘಗಳಿಗೆ ಹಣ ಜಮ ಮಾಡದೆ ಇರುವ ಹಿನ್ನೆಲೆಯಲ್ಲಿ ಉತ್ಪಾದಕರಿಗೆ ಬಟವಾಡೆ ಮಾಡಲು ತೊಂದರೆಯಾಗುತ್ತಿದೆ.
ಒಕ್ಕೂಟದ ವ್ಯಾಪ್ತಿಯಲ್ಲಿ ಶೇ.೬೦ ಸಂಘಗಳು ಹಾಲು ಖರೀದಿ ಹಣವನ್ನು ಆಪ್ ಟು ಡೇಟ್ ನೀಡುತ್ತಿದ್ದು, ತಾವುಗಳು ಹಾಲಿನ ಬಟವಾಡವನ್ನು ೪-೫ ದಿನಗಳ ತಡವಾಗಿ ಸಂಘಗಳಿಗೆ ಜಮ ಮಾಡಲಾಗುತ್ತಿದೆ. ಆದಕಾರಣ ತಾವುಗಳು ಒಕ್ಕೂಟದಲ್ಲಿ ೧ ವಾರದ ಬಿಲ್ಲನ್ನು ಮಾತ್ರ ಬಾಕಿ ಉಳಿಸಿಕೊಂಡು ಉಳಿದ ಮೊತ್ತವನ್ನು ನಿಗಧಿತ ದಿನಾಂಕದೊಳಗೆ ಸಂಘಗಳಿಗೆ ಜಮೆ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಗೌರವಾಧ್ಯಕ್ಷ ಚಿನ್ನಹಳ್ಳಿ ಗೋಪಾಲ್, ಖಜಾಂಚಿ ಮುನಿರಾಜು, ಕೋಲಾರ ತಾಲೂಕು ಅಧ್ಯಕ್ಷ ತೊಂಡಾಲ ಮಂಜು, ಕಾರ್ಯದರ್ಶಿ ತಿಮ್ಮೇಗೌಡ, ಗೌರಿಬಿದನೂರು ತಾಲೂಕು ಅಧ್ಯಕ್ಷ ಎಂ.ಆರ್.ಶ್ರೀನಿವಾಸ್, ಶನಿವಾರರೆಡ್ಡಿ, ಶಿಡ್ಲಘಟ್ಟ ಚಂದ್ರೇಗೌಡ, ಚಿಂತಾಮಣಿ ಕೆಂಪರೆಡ್ಡಿ, ಮುಖಂಡರಾದ ಎಚ್.ವಿ. ವೆಂಕಟರೆಡ್ಡಿ, ಅರಹಳ್ಳಿ ಶ್ರೀನಿವಾಸ್, ಹೂಹಳ್ಳಿ ರಾಧಾಕೃಷ್ಣ, ಬೆಣ್ಣಂಗೂರು ವೆಂಕಟೇಶ್, ಶಾನುಭೋಗನಹಳ್ಳಿ ಗೋಪಾಲ್, ಮುದುವಾಡಿ ಹೊಸಹಳ್ಳಿ ಮೋಹನ್, ಮದನಹಳ್ಳಿ ರಮೇಶ್, ವಿಟ್ಟಪ್ಪನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ವಿ.ಆರ್.ಮಂಜುನಾಥ್ ಇದ್ದರು.