ಅಗ್ನಿ ಮುನ್ನೆಚ್ಚರಿಕೆ, ಶಮನ ತರಬೇತಿ
ಸಂಜೆವಾಣಿ ನ್ಯೂಸ್
ಮೈಸೂರು: ಜು.23:- ವಿಜಯ ವಿಠಲ ವಿದ್ಯಾ ಶಾಲೆಯಲ್ಲಿ ಅಗ್ನಿ ಮುನ್ನೆಚ್ಚರಿಕೆ ಹಾಗೂ ಶಮನದ ಬಗ್ಗೆ ವಿಜಯ ವಿಠಲ ವಿದ್ಯಾ ಶಾಲೆಯ ಶಿಕ್ಷಕರಿಗೆ ಹಾಗೂ ಬಿಎಸ್‍ಎಸ್ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗದವರಿಗೆ ತರಬೇತಿ ನೀಡಲಾಯಿತು.
ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ನಾಗರಾಜ್ ಅರಸು ಮಾತನಾಡಿ, ದಹನ ಸಿದ್ದಾಂತದ ಪರಿಚಯ ಹಾಗೂ ದಹನದ ವರ್ಗೀಕರಣ ಮತ್ತು ಅಗ್ನಿ ನಂದಿಸುವ ವಿಧಾನ, ವಿದ್ಯುತ್ತಿನಿಂದ ಉಂಟಾಗುವ ಅಗ್ನಿ ಅವಘಡಗಳ ಬಗ್ಗೆ ತಿಳಿಸಿದರು.
ಪ್ರತಿನಿತ್ಯ ಸಮಾಜದಲ್ಲಿ ಅಗ್ನಿಯಿಂದ ಉಂಟಾಗುತ್ತಿರುವ ಅನಾಹುತಗಳನ್ನು ಉದಾಹರಣೆಗಳ ಮೂಲಕ ತಿಳಿಸಿದ ಅವರು, ಅಗ್ನಿಯಿಂದ ಅಪಾಯ ಎದುರಾದÀ ಸಂದರ್ಭದಲ್ಲಿ ಪಾರಾಗುವ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಮನದಟ್ಟು ಮಾಡಿಸಿದರು. ಪ್ರಸ್ತುತ ಸಂದರ್ಭದಲ್ಲಿ ಅಗ್ನಿಯಿಂದ ತೊಂದರೆಗೆ ಒಳಗಾದವರನ್ನು, ಕೊಳವೆ ಬಾವಿಗಳಲ್ಲಿ ಸಿಲುಕಿ ಕೊಂಡವರನ್ನು, ಆತ್ಮಹತ್ಯೆಗೆ ಪ್ರಯತ್ನಿಸುವಂತಹ ವ್ಯಕ್ತಿಗಳನ್ನು ಅಗ್ನಿಶಾಮಕ ಸಿಬ್ಬಂದಿ ವರ್ಗದವರು ಮನವೊಲಿಸಿ ಅವರನ್ನು ರಕ್ಷಿಸುವ ರೋಚಕ ಸಂದರ್ಭಗಳನ್ನು ತಿಳಿಸಿದರು.
ಮಧ್ಯಾಹ್ನದ ಅವಧಿಯಲ್ಲಿ ಪಿರಿಯಾಪಟ್ಟಣ ವಿಭಾಗದ ಅಗ್ನಿಶಾಮಕ ಠಾಣಾಧಿಕಾರಿ ಅಜಯ್ ಕುಮಾರ್ ಮಾತನಾಡಿ, ಶೈಕ್ಷಣಿಕ ಕಟ್ಟಡಗಳಲ್ಲಿ ಉಂಟಾಗುವ ಅಗ್ನಿ ಅವಘಡಗಳು ಮತ್ತು ಅವುಗಳಿಂದಾಗುವ ಅಪಾಯ, ಆ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವರಿಸಿದರು. ನಂತರ ತುರ್ತು ಸಂದರ್ಭದಲ್ಲಿ ಅಪಾಯಕ್ಕೆ ಒಳಗಾದವರನ್ನು ಸ್ಥಳಾಂತರಿಸುವ ಕಾರ್ಯ ವಿಧಾನದ ಬಗ್ಗೆ ತಿಳಿಸಿಕೊಟ್ಟರು.
ಅಗ್ನಿಶಾಮಕದ ವಿವಿಧ ಪ್ರಕಾರಗಳಾದ ಹೋಸ್ ಮತ್ತು ಹೈಡ್ರಾಂಟ್‍ಗಳ ಬಗ್ಗೆ ತಿಳಿಸಿದರು ಹಾಗೂ ಅವುಗಳನ್ನು ಬಳಸುವ ರೀತಿಯನ್ನು ಪ್ರಾಯೋಗಿಕವಾಗಿ ಶಿಕ್ಷಕರಿಂದ ಮಾಡಿಸಲಾಯಿತು. ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಸಂತೋಷದಿಂದ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ವಿಜಯ ವಿಠಲ ವಿದ್ಯಾ ಶಾಲೆಯ ಪ್ರಾಂಶುಪಾಲೆ ವೀಣಾ.ಎಸ್.ಎ, ವಿವಿಧ ವಿಭಾಗದ ಮುಖ್ಯಸ್ಥರು, ಶಿಕ್ಷಕರು ಉಪಸ್ಥಿತರಿದ್ದರು.