ಪಿಂಜಾರ, ನದಾಫ್ ನಿಗಮಕ್ಕೆ ಅನುದಾನ ಬಿಡುಗಡೆಗೆ ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಕೆ
ಸಂಜೆವಾಣಿ ವಾರ್ತೆ
ವಿಜಯಪುರ,ಜು.23:ಕರ್ನಾಟಕ ರಾಜ್ಯ ದಾದಾ, ಪಿಂಜಾರ ಸಂಘದ ವತಿಯಿಂದ ನೂತನವಾಗಿ ಘೋಷಿಸಿರುವ “ಪಿಂಜಾರ, ನದಾಫ್ ಹಾಗೂ ಇತರ 13 ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವಂತೆ ವಿಜಯಪುರ ತಹಸೀಲ್ದಾರರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘದ ವಿಜಯಪುರ ತಾಲೂಕು ಘಟಕದ ಅಧ್ಯಕ್ಷ ಆಯುಬ್ ನದಾಫ್ ಮಾತನಾಡಿ, ಕರ್ನಾಟಕ ರಾಜ್ಯಾದ್ಯಂತ ಸುಮಾರು 22 ರಿಂದ 25 ಲಕ್ಷಗಳ ಜನಸಂಖ್ಯೆ ಹೊಂದಿರುವ ನದಾಫ್/ಪಿಂಜಾರ ಜನಾಂಗವು ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ, ಔದ್ಯೋಗಿಕ, ರಾಜಕೀಯ ಹಾಗೂ ಹಲವಾರು ರಂಗಗಳಲ್ಲಿ ಅತ್ಯಂತ ಹಿಂದುಳಿದ ಮತ್ತು ಕಡುಬಡತನದಲ್ಲಿ ಕಷ್ಟಕರ ಜೀವನವನ್ನು ನಡೆಸುತ್ತಿರುವ ಶೋಷಿತ ಸಮಾಜವಾಗಿದೆ. ಈ ಜನಾಂಗ ಇಸ್ಲಾಂ ಧರ್ಮದ ಮುಸ್ಲಿಂ (ಅಲ್ಪಸಂಖ್ಯಾತರ) ಪಂಗಡದಲ್ಲಿದ್ದರೂ ಸಹ ಸರಕಾರದ ವೃತ್ತಿಪರ ಜಾತಿಗಳ ವಿಂಗಡನೆ ಅನ್ವಯ ನದಾಫ್/ಪಿಂಜಾರ ಉಪ ಪಂಗಡಕ್ಕೆ ಸೇರಿದ್ದು, ಹಿಂದುಳಿದ ವರ್ಗಗಳ ಇಲಾಖೆಗೆ ಸಂಬಂಧಿಸಿದ ಪ್ರವರ್ಗ-1 ರ ಮೀಸಲಾತಿಯನ್ನು ಹೊಂದಿದೆ. ಸರಕಾರದ ನಿರ್ದೇಶನದಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮತ್ತು ಇತರ ಯೋಜನೆಗಳಿಂದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಸತತವಾಗಿ ತಾಂತ್ರಿಕ ದೋಷಗಳಿಂದ ಹಾಗೂ ಅಧಿಕಾರಿಗಳ ನಿರ್ಲಕ್ಷತೆಯಿಂದ ಯಾವದೇ ಯೋಜನೆಗಳು ಸರಿಯಾಗಿ ತಲುಪದೇ ವಂಚಿತರಾಗುತ್ತಿದ್ದು, ಇದರ ನಿವಾರಣೆಗಾಗಿ ಹಲವಾರು ವರುಷಗಳಿಂದ ಹೋರಾಟ ಮಾಡಿ ಸಮಾಜದ ಅಭಿವೃದ್ಧಿಗೆ ನೇರವಾಗಿ ಅನುಕೂಲವಾಗಲೆಂದು ಪ್ರತ್ಯೇಕ ನಿಗಮ ಮಂಡಳಿಗೆ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಹಿಂದಿನ ಸರಕಾರ ಈ ಸಮಾಜದ ತೊಂದರೆಗಳನ್ನು ಗಮನಿಸಿ ಸಾಮಾಜಿಕ ಕಳಕಳಿಯಿಂದ ಜನಾಂಗಕ್ಕೆ ನೇರವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಲು “ಪಿಂಜಾರ/ನದಾಫ್ ಹಾಗೂ ಇತರ 13 ಜಾತಿಗಳ ಅಭಿವೃದ್ಧಿ ನಿಗಮ”ದ ಆದೇಶದೊಂದಿಗೆ ಘೋಷಣೆ ಮಾಡಿದೆ. ನಂತರ ಈ ಹೊಸ ಸರಕಾರ ಬಂದನಂತರ ಸಮಾಜದ ಹಿತದೃಷ್ಟಿಯಿಂದ ಹಾಗೂ ಜನಸಂಖ್ಯೆ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಲು ಬಜೆಟ್ ನಲ್ಲಿ ಅಥವಾ ವಿಶೇಷ ಪ್ಯಾಕೇಜ್ ಮೂಲಕ ಅವಶ್ಯ ಇರುವ ಅನುದಾನ ನೀಡಬೇಕೆಂದು ಸತತವಾಗಿ ಮುಖ್ಯಮಂತ್ರಿ, ಸಚಿವರುಗಳಿಗೆ ಮನವಿ ನೀಡುತ್ತಿದ್ದರೂ ಸಹ ಸರಕಾರ ಸ್ಪಂದಿಸದೇ ಸಮಾಜವನ್ನು ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತಲಿದೆ ಎಂದರು.
ಹಾಲಿ ಸರಕಾರವು ಬಡವರ ಪರ ಸ್ಪಂದಿಸುವ ಹಾಗೂ ಸಾಮಾಜಿಕ ನ್ಯಾಯವನ್ನು ನೀಡುವ ದಿಟ್ಟವಾದ ಸರಕಾರವೆಂದು ಚುನಾವಣೆ ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ಪ್ರಚಾರವನ್ನು ಮಾಡಿಕೊಳ್ಳುತ್ತಿದ್ದರೂ ಸಹ ರಾಜ್ಯದಲ್ಲಿ ಸುಮಾರು 25 ಲಕ್ಷಗಳ ಜನಸಂಖ್ಯೆ ಹೊಂದಿದ ನಮ್ಮಂತಹ ಅತ್ಯಂತ ಬಡ ಸಮಾಜಗಳನ್ನು ಕಡೆಗಣನೆ ಹಾಗೂ ನಿರ್ಲಕ್ಷತನ ತೋರುವುದು ಸಮಾಜಕ್ಕೆ ಮಾಡುವ ಘೋರ ಅನ್ಯಾಯವಾಗಿದೆ ಎಂದು ಅವರು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ಕಳಕಳಿವುಳ್ಳ ನಾಯಕರಿದ್ದು ಅತ್ಯಂತ ಹಿಂದುಳಿದ ಹಾಗೂ ಶೋಷಿತ ಈ ಸಮಾಜವನ್ನು ಕಡೆಗಣಿಸದೇ ಸಮಾಜದ ಹಿತಾಸಕ್ತಿಯಿಂದ ಕಷ್ಟಗಳನ್ನು ಗುರುತಿಸಿ, ಜನಸಂಖ್ಯೆ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಲು ತಕ್ಷಣ “ಪಿಂಜಾರ/ನದಾಫ್ ಪ್ರತ್ಯೇಕ ನಿಗಮ” ಕ್ಕೆ ಅವಶ್ಯ ಇರುವ ಅನುದಾನವನ್ನು ನೀಡಬೇಕೆಂದು ರಾಜ್ಯಾದ್ಯಂತ ತಾಲೂಕ ಮತ್ತು ಜಿಲ್ಲಾ ಘಟಕಗಳಿಂದ ಏಕಕಾಲದಲ್ಲಿ ಮನವಿ ಮಾಡಲಾಯಿತು.
ನಮ್ಮ ಬೇಡಿಕೆಗೆ ಸ್ಪಂಧಿಸದೇ ಇದ್ದಲ್ಲಿ ಸರಕಾರವು ಹಿಂದುಳಿದ ಸಮಾಜಗಳಿಗೆ ಘೋರ ಅನ್ಯಾಯ ಎಸಗುತ್ತಿರುವ ಬಗ್ಗೆ ರಾಜ್ಯಾದ್ಯಂತ ಸಾರ್ವಜನಿಕರ ಗಮನಕ್ಕೆ ತರಲು ಬಹಿರಂಗವಾಗಿ ಪ್ರತಿಭಟನೆ, ಧರಣಿಗಳನ್ನು ಮಾಡಲಾಗುವುದು.
ಈ ಸಂದರ್ಭದಲ್ಲಿ ಮಹಿಬೂಬ್ ಹತ್ತಳ್ಳಿ, ಮೌಲಾಸಾಬ ನದಾಫ, ಅಬ್ದುಲ್ ಕರೀಮ ನದಾಫ್, ಮೈಬೂಬ್ ನೇಗನಾಳ, ಹುಸೇನ್‍ಸಾಬ ರೂಗಿ, ನದೀಮ ನದಾಫ್, ಸಮೀರ್ ಪಠಾಣ, ಮಹಿಬೂಬ್ ನದಾಫ್ ಮತ್ತಿತರರು ಉಪಸ್ಥಿತರಿದ್ದರು.