ಜಿಲ್ಲಾ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಮೂಡ್ಲುಪುರ ನಂದೀಶ್ ಪುನರಾಯ್ಕೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.22- ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಮೂಡ್ಲುಪುರ ನಂದೀಶ್ ಭರ್ಜರಿ ಜಯಗಳಿಸುವ ಮೂಲಕ ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಅವರು ನಿನ್ನೆ ನಡೆದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಸಮಿತಿಯ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಹಂಗಳ ನಂಜಪ್ಪ ರವರನ್ನು 192 ಮತಗಳ ಅಂತರದಿಂದ ಸೋಲಿಸಿ ಭರ್ಜರಿ ಜಯಗಳಿಸಿದ್ದಾರೆ.
ನಗರದ ನಂದಿ ಭವನದಲ್ಲಿ ನಡೆದ ಮತದಾನ ಹಾಗೂ ಮತ ಎಣಿಕೆ ನಡೆದು ಅಂತಿಮವಾಗಿ ನಂದೀಶ್ 1571 ಮತಗಳನ್ನು ಪಡೆದು 191 ಮತಗಳ ಅಂತರದಲ್ಲಿ ಜಯ ಗಳಿಸಿದರು. ಪ್ರತಿಸ್ಪರ್ಧಿ ಹಂಗಳ ನಂಜಪ್ಪ 1380 ಮತಗಳನ್ನು ಪಡೆದುಕೊಂಡರು.
ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಚುನಾವಣೆಯಲ್ಲಿ ಹಂಗಳ ನಂಜಪ್ಪ ಮತ್ತು ಮೂಡ್ಲುಪುರ ನಂದೀಶ್ ನಡುವೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿತ್ತು. ಎರಡೂ ಬಣಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿಯೂ ಬಿರುಸಿನ ಪ್ರಚಾರ ನಡೆಸಿತ್ತು.
ಈ ಚುನಾವಣೆಯನ್ನು ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ಯಡಿಯೂರಪ್ಪ ಅವರ ಆಪ್ತ ಕೆಆರ್‍ಐಡಿಎಲ್ ಮಾಜಿ ಅಧ್ಯಕ್ಷ ರುದ್ರೇಶ್ ಅಭಿಮಾನಿಗಳ ನಡುವಿನ ಚುನಾವಣೆ ಎಂದೇ ಗುಸುಗುಸು ಕಾಣಿಸಿಕೊಂಡಿತ್ತು. ಏಕೆಂದರೆ, ಮೂಡ್ಲುಪುರ ನಂದೀಶ್ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರುದ್ರೇಶ್‍ರೊಂದಿಗೆ ಗುರುತಿಸಿಕೊಂಡಿದ್ದರು. ಇದು ವಿ. ಸೋಮಣ್ಣ ಅವರ ಅಭಿಮಾನಿಗಳನ್ನು ಕೆರಳಿಸಿತ್ತು. ಅಂತಿಮವಾಗಿ ಮೂಡ್ಲುಪುರ ನಂದೀಶ್ ಜಯಗಳಿಸುವುದರೊಂದಿಗೆ ರುದ್ರೇಶ್ ಮೇಲುಗೈ ಸಾಧಿಸಿದಂತಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಜಿಲ್ಲೆಯ ಚಾ.ನಗರ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲ ತಾಲೂಕಿನಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಚಾಮರಾಜನಗರ ತಾಲೂಕು ಮತಗಟ್ಟೆಯಲ್ಲಿ 64 ಮತಗಳು ಹಾಗೂ ಕೊಳ್ಳೇಗಾಲ- ಹನೂರು ಮತಗಟ್ಟೆಗಳಲ್ಲಿ 318 ಮುನ್ನಡೆಯನ್ನು ನಂದೀಶ್ ಪಡೆದುಕೊಂಡು ಅಂತಿಮವಾಗಿ 191 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರೆ, ಹಂಗಳ ನಂಜಪ್ಪ ಸ್ವ ತಾಲೂಕು ಗುಂಡ್ಲುಪೇಟೆಯಲ್ಲಿ ಮಾತ್ರ 193 ಮತಗಳ ಮುನ್ನಡೆಯನ್ನು ಪಡೆದುಕೊಂಡರು.
ಇನ್ನು ಮಹಾಸಭಾದ ನಿರ್ದೇಶಕರಾಗಿ ಎನ್. ಉಮೇಶ್ (1695), ಆರ್.ಎನ್. ಗಿರೀಶ್ (1500), ಪತ್ರಕರ್ತ ಮನು ಶ್ಯಾನ್‍ಬೋಗ್ (1491), ಜಿ. ಗಿರೀಶ್ (1454), ಎಸ್. ಮಹದೇವಸ್ವಾಮಿ (1405), ಎನ್.ಆರ್. ಪುರುಷೋತ್ತಮ್ (1404) ಮಲ್ಲಿಕಾರ್ಜುನಪ್ಪ ಉ. ನಟೇಶ್(1392), ನಿರಂಜನಮೂರ್ತಿ (1370) ಡಿ.ಪಿ ಜಗದೀಶ್ (1350) ಟಿ. ಗುರು ಕಾವುದವಾಡಿ(1316), ಕೆ.ಎಂ. ಬಸವರಾಜು (1312), ಕೆ.ಜಿ ಗುರುಸ್ವಾಮಪ್ಪ (1300), ಮಂಜೇಶ್ ಮೂಡ್ಲುಪ್ಮರ (1291), ಮುರುಡೇಶ್ವರಸ್ವಾಮಿ(1259), ಪಿ. ಇಂದ್ರ (1253), ಸ್ಟೈಲ್ ಮಂಜುನಾಥ್. ಕೆ.ಜಿ. (1253), ಮಲ್ಲಿಕಾರ್ಜುನಸ್ವಾಮಿ ಶ್ಯಾಡರಹಳ್ಳಿ(1247), ಲೊಕೇಶ್ ಕೆ.ಆರ್. (1240) ವೈ.ಪಿ. ರಾಜೇಂದ್ರಪ್ರಸಾದ್ (1236), ವಿರೇಂದ್ರ(1226) ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಮಹಿಳಾ ನಿರ್ದೇಶಕರಾಗಿ ಎಲ್. ಗಾಯಿತ್ರಿ ಚನ್ನಬಸಪ್ಪ, ರತ್ನಮ್ಮ ನಂಜಪ್ಪ, ಬಿ. ರತ್ನಮ್ಮ ಬಸವರಾಜು, ಎಸ್.ಪಿ. ಗೀತಾ ಮಂಜುನಾಥ್, ಎಸ್. ಉಷಾರಾಣಿ ಇಂದ್ರಸ್ವಾಮಿ, ಎನ್.ಎಸ್. ರೇಣುಕಾ ಮಲ್ಲಿಕಾರ್ಜುನ್, ಎನ್. ಶೋಭಾ ಪ್ರಸಾದ್, ಎಂ. ಅನುಪಮಾ ನಂಜುಂಡಸ್ವಾಮಿ, ಗಾಯತ್ರಿ ನಾಗೇಶ್, ಲತಾ ಜಯಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಡಿ.ಕೆ. ದೊರೆಸ್ವಾಮಿ, ಸಹಾಯಕ ಚುನಾವಣಾಧಿಕಾರಿಗಳಾದ ಎಂ. ಗೌರಿಶಂಕರ್, ಡಿ.ಎನ್. ಮಹದೇವಪ್ಪ, ಶಿವಕುಮಾರಸ್ವಾಮಿ ತಿಳಿಸಿದ್ದಾರೆ.
ಸಮಾಜ ಅಭಿವೃದಿಗೆ ದುಡಿಯೋಣ : ನೂತನ ಅಧ್ಯಕ್ಷರಾಗಿ ಪುನಾರಾಯ್ಕೆಯಾದ ಮೂಡ್ಲುಪುರ ನಂದೀಶ್ ಮಾತನಾಡಿ, ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಬಂಧುಗಳು ಹೆಚ್ಚಿನ ಮತಗಳನ್ನು ನೀಡಿ ನನ್ನನ್ನು ಪುನಾರಾಯ್ಕೆ ಮಾಡಿರುವುದಕ್ಕೆ ನಾನು ಅಭಾರಿಯಾಗಿದ್ದೇನೆ. ಮುಂದಿನ ದಿನಗಳಲಿ ಸಮಾಜದ ಅಭಿವೃದ್ದಿಗಾಗಿ ಎಲ್ಲರು ಒಗ್ಗಟ್ಟಾಗಿ ದುಡಿಯೋಣ. ಬಸವ ಭವನ ನಿರ್ಮಾಣ, ಬಸವ ಪುತ್ಥಳಿ ಉದ್ಘಾಟನೆ, ವಿದ್ಯಾರ್ಥಿ ನಿಲಯ, ಕೌಶಲ್ಯ ಅಭಿವೃದ್ದಿ ಕೇಂದ್ರ ಸೇರಿದಂತೆ ಜಿಲ್ಲೆಯಲ್ಲಿ ಸಮಾಜವನ್ನು ಒಗ್ಗಟ್ಟಿನಿಂದ ಅಭಿವೃದ್ದಿಪಡಿಸುವುದು ನನ್ನ ಗುರಿಯಾಗಿದೆ. ಮಠಾಧೀಪತಿಗಳು, ಹಿರಿಯ ಮುಖಂಡರು, ಎಲ್ಲಾ ನಿರ್ದೇಶಕರು, ಸಮಾಜದ ಬಂಧುಗಳು. ಯುವಕರು ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಮೂಡ್ಲುಪುರ ನಂದೀಶ್ ಮನವಿ ಮಾಡಿದರು.