ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕಾರ್ಯನಿರ್ವಹಿಸಿ: ಹೆಚ್.ವಿ. ಚಂದ್ರು
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.23-ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಚಾಮರಾಜನಗರ ಜಿಲ್ಲೆ ಮೊದಲನೇ ಸ್ಥಾನಕ್ಕೆ ಬರಲು ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ಚಂದ್ರು ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಹಾಗೂ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮುಖೇನ ಅರ್ಹರೆಲ್ಲರಿಗೂ ಸೌಲಭ್ಯ ತಲುಪಿಸಬೇಕು.
ಫಲಾನುಭವಿಗಳು ಯೋಜನೆಯ ಪ್ರಯೋಜನ ಬಡ ಜನತೆಗೆ ತಲುಪಿಲ್ಲ ಎಂಬ ದೂರುಗಳು ಬರಬಾರದು. ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಮುಟ್ಟಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.
ಪ್ರತಿ ಯೋಜನೆಯ ಪ್ರಗತಿ ವಿವರ ಪಡೆದ ಅಧ್ಯಕ್ಷರು ಅನುಷ್ಠಾನದಲ್ಲಿ ಯಾವುದಾರೂ ತೊಂದರೆಗಳು ಕಂಡು ಬಂದರೆ ಕೂಡಲೇ ಅಧಿಕಾರಿಗಳು ಪರಿಹರಿಸಬೇಕು. ಬ್ಯಾಂಕುಗಳಲ್ಲಿ ಫಲಾನುಭವಿಗಳು ಹಣ ಪಡೆಯಲು ಇರುವ ತೊಡಕುಗಳನ್ನು ನಿವಾರಣೆ ಮಾಡಬೇಕು. ಆಧಾರ್, ಮೊಬೈಲ್ ನಂಬರ್ ಜೋಡಣೆÀ ಮಾಡದಿರುವ ಕಾರಣಗಳಿಗೆ ಸೌಲಭ್ಯ ವಂಚಿತವಾಗಬಾರದು ಎಂದರು.
ಅನ್ನಭಾಗ್ಯದಂತಹ ಮಹತ್ತರ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಯಾಗಬೇಕು. ಪಡಿತರ ಚೀಟಿದಾರರಿಗೆ ಡಿಬಿಟಿ ಹಣ ಹೊಂದಾಣಿಕೆಯಾಗದೆ ಇದ್ದಲ್ಲಿ ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ತೊಂರೆಗಳನ್ನು ಪರಿಹರಿಸಬೇಕು. ತಾಲೂಕು ಮಟ್ಟದಲ್ಲಿಯೂ ತ್ವರಿತ ಸ್ಪಂದನೆ ಸಿಗಬೇಕು ಎಂದು ಅಧ್ಯಕ್ಷರು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆ ನೊಂದಣಿಗೆ ಬಾಕಿ ಇರುವವರನ್ನು ಸೇರ್ಪಡೆ ಮಾಡುವ ಕಾರ್ಯದಲ್ಲಿ ಇನ್ನಷ್ಟು ಪ್ರಗತಿಯಾಗಬೇಕಿದೆ. ನೊಂದಣಿ ಮಾಡಿಸಲು ಬಾಕಿ ಇರುವ ಫಲಾನುಭವಿಗಳ ಮಾಹಿತಿಯನ್ನು ಪಡೆದು ಅಂಗನವಾಡಿ ಕಾರ್ಯಕರ್ತೆಯರ ಸಹಕಾರ ಪಡೆದು ಶೇ. 100ರಷ್ಟು ಅರ್ಹರೆಲ್ಲರಿಗು ನೊಂದಣಿಯಾಗುವಂತೆ ಕ್ರಮವಹಿಸಿ. ಬ್ಯಾಂಕ್ ಖಾತೆಗಳು ಚಾಲ್ತಿಯಿಲ್ಲದ ಫಲಾನುಭವಿಗಳ ವಿವರಗಳನ್ನು ತಾಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ನೀಡಿ ಸೌಲಭ್ಯ ತಲುಪಿಸಿ ಎಂದರು.
ಗೃಹಜ್ಯೋತಿ, ಯುವನಿಧಿ, ಶಕ್ತಿ ಯೋಜನೆಗಳ ಪ್ರಗತಿ ಪರಾಮರ್ಶಿಸಿ ಯೋಜನೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜನರನ್ನು ತಲುಪಲಿ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಲಹೆಗಳನ್ನು ಪಡೆದು ಯೋಜನೆಗಳ ಪ್ರಗತಿಯಲ್ಲಿ ಸಾಗಲು ಮುಂದಾಗುವಂತೆ ಅಧ್ಯಕ್ಷ ಹೆಚ್.ವಿ. ಚಂದ್ರು ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗೀತಾ ಹುಡೇದ ಅವರು ಮಾತನಾಡಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ತೊಡಗಿಕೊಳ್ಳಬೇಕು. ಫಲಾನುಭವಿಗಳಿಂದ ಬರುವ ಅಹವಾಲು ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು. ಸರ್ಕಾರದ ಯೋಜನೆಗಳ ಉದ್ದೇಶ ಫಲಪ್ರದವಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಅಧಿಕಾರಿಗಳು ನಿರ್ವಹಿಸಬೇಕು ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ಸದಸ್ಯರು ಯೋಜನೆಗಳ ಪ್ರಗತಿ ಪರಿಶೀಲಿಸಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೋಮೇಶ್ವರ ನಲ್ಲೂರು, ಎಸ್. ಪ್ರಭು ಪ್ರಸಾದ್, ಸಿದ್ದರಾಜು, ಎಸ್.ಆರ್.ಎಸ್. ರಾಜಶೇಖರ್, ಸದಸ್ಯರಾದ ಕೆ.ವಿ. ಚಿನ್ನಸ್ವಾಮಿ, ಹೆಚ್.ಜಿ. ಉಮಾಪತಿ, ಎಂ. ರಾಚಯ್ಯ, ಅಕ್ಬರ್ ಪಾಷ, ರಾಜೇಂದ್ರ. ಆರ್. ಹೆಚ್.ಎನ್. ಜಯರಾಜು, ಭಾಗ್ಯ, ದೇವರಾಜು. ಎಂ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಯೋಗಾನಂದ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಜಿಲ್ಲಾ ಉದ್ಯೋಗಾಧಿಕಾರಿ ಎ. ಮಹಮ್ಮದ್ ಅಕ್ಬರ್, ಇನ್ನಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.