ಅಣಬೆ ಕೃಷಿ ಲಾಭದಾಯಕ ಉದ್ಯಮ: ಡೀನ್ ಡಾ. ಎ. ಭೀಮಪ್ಪ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.23:ಐಸಿಎಆರ್, ವಿಜಯಪುರ ಕೃಷಿ ವಿಜ್ಞಾನ ಕೇಂದ್ರದಲ್ಲಿ 3 ದಿನಗಳ ಕೌಶಲ್ಯ ಅಣಬೆ ಬೇಸಾಯ ಮತ್ತು ಮೌಲ್ಯವರ್ಧನೆ ತರಬೇತಿ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡೀನ್ ಡಾ. ಎ. ಭೀಮಪ್ಪ, ಅಣಬೆ ಬೇಸಾಯ ಇತ್ತೀಚಿನ ದಿನಗಳಲ್ಲಿ ಬೇಡಿಕೆಯಾದ ಉದ್ದಿಮೆಯಾಗಿದೆ. ಸಿಂಪಿ ಅಣಬೆ (ಆಸ್ಟರ್) ಬೇಸಾಯ ಅತ್ಯಂತ ಸರಳವಾದ ಉತ್ಪಾದನೆಯಾಗಿದ್ದು, ಕೇವಲ ಹತ್ತು ಸಾವಿರ ರೂಪಾಯಿ ಹೂಡಿಕೆಯಿಂದ ಪ್ರಾರಂಭಿಸಬಹುದಾದ ಉದ್ದಿಮೆಯಾಗಿದೆ. ಆದರೆ ಬಟನ್ ಅಣಬೆ ಬೇಸಾಯಕ್ಕೆ ಹೆಚ್ಚಿನ ಹಣದ ಹೂಡಿಕೆ ಮಾಡುವಂತಾದರೂ, ಹೆಚ್ಚಿನ ಆದಾಯ ತರುವ ಉದ್ದಿಮೆಯಾಗಿದೆ. ಅಣಬೆ ಬೇಸಾಯದಲ್ಲಿ ಸಾಧನೆ ಮಾಡಿದ ಉದ್ದಿಮೆದಾರರಾದ ಧಾರವಾಡದ ಸಸ್ಯ ಸಾಯಿ ಅಣಬೆ ಕೇಂದ್ರ ರಾಜದುರ್ಗ, ಮತ್ತು ಲಕ್ಷ್ಮೇಶ್ವರದ ಈರಣ್ಣ ಶಿರ್ನಳ್ಳಿ ಅವರನ್ನು ಶ್ಲಾಘಿಸುತ್ತಾ, ಅಣಬೆಯ ಬೇಡಿಕೆಯನ್ನು ಹೆಚ್ಚಿಸಲು ಜನರಲ್ಲಿ ಅಣಬೆಯ ಪೌಷ್ಠಿಕತೆ ಮಹತ್ವ ಮತ್ತು ಆಹಾರದಲ್ಲಿ ಬಳಕೆಯಿಂದ ಆರೋಗ್ಯ ಕಾಪಾಡುವ ಕುರಿತು ತಿಳುವಳಿಕೆ ಕೊಡಲು ಒತ್ತು ಕೊಡಬೇಕಾಗಿದೆ ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಡಾ. ವಿಲಿಯಂ ರಾಜಶೇಖರ ಮುಖ್ಯ ಅತಿಥಿಗಳಾಗಿ ಮಾತನಾಡಿ, ಅಣಬೆ ಒಂದು ಪೌಷ್ಠಿಕಾಂಶಭರಿತ ಉತ್ಪನ್ನ. ಇದನ್ನು ಉತ್ಪಾದನೆ ಮಾಡಿ ಮೌಲ್ಯವಧರ್Àನೆ ಮಾಡಬೇಕು. ಅಣಬೆ ಕೃಷಿ ಕೈಗೊಳ್ಳುವ ರೈತರಿಗೆ ಬೇಕಾಗುವ ಸಲಕರಣೆಗಳನ್ನು ಇಲಾಖೆಯ ಸಹಾಯಧನದಲ್ಲಿ ನೀಡಲಾಗುವದು ಎಂದರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಅಣಬೆ ಅತೀ ಸೂಕ್ಷ್ಮ ಹಾಗೂ ಬೆಲೆಬಾಳುವ ಉತ್ಪನ್ನವಾಗಿದೆ. ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮ ಬೇಡಿಕೆಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇದÀನ್ನು ಬೆಳೆಸಲು ರೈತರು ಮುಂದೆ ಬಂದರೆ ಕೃಷಿ ವಿಜ್ಞಾನ ಕೇಂದ್ರದಿಂದ ತರಬೇತಿ ಆಯೋಜಿಸಲಾಗುವುದೆಂದರು.
ಕೆವಿಕೆಯ ಹಿರಿಯ ವಿಜ್ಞಾನಿ ಡಾ. ಎಸ್.ಎಂ. ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿಜಯಲಕ್ಷ್ಮೀ ಮುಂದಿನಮನಿ ನಿರೂಪಿಸಿದರು. ಡಾ. ಶಿವರಾಜ ಕಾಂಬಳೆ ಸ್ವಾಗತಿಸಿದರು. ಡಾ. ಶ್ವೇತಾ ಮನ್ನಿಕೇರಿ ವಂದಿಸಿದರು.
ಡಾ. ಜಿ.ಶ್ರೀನಿವಾಸಲು, ಮುಖ್ಯ ವಿಜ್ಞಾನಿ ಡಾ. ಮಿಲಿಂದ ಪೋತದಾರ, ಇಂಡಿ ಕೃಷಿ ವಿಜ್ಞಾನ ಕೇಂದ್ರದ ಡಾ. ಶಿವಶಂಕರಮೂರ್ತಿ ಎಂ., ಉಪ ಕೃಷಿ ನಿರ್ದೇಶಕ ಡಾ. ಬಾಲರಾಜ ಬಿರಾದಾರ, ಡಾ. ಕಿರಣಸಾಗರ ಹಾಗೂ ಜಿಲ್ಲೆಯ ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.