ಸಿಂದಗಿ ತಾಲೂಕಾ ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ, ಪರಿಶೀಲನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.23:ಸಿಂದಗಿಯ ವಿವಿಧ ತಾಲೂಕಾ ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೋಮವಾರ ಭೇಟಿ ನೀಡಿ ತಾಲೂಕಾ ಆಡಳಿತದ ಕಾರ್ಯನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿದರು.
ತಹಸೀಲ್ದಾರ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಆಧಾರ ನೋಂದಣಿ, ಕಂದಾಯ ಗ್ರಾಮಗಳ ಮಾಹಿತಿ, ಭೂಮಿ ಪ್ರಗತಿ, ಮೋಜಣಿ ಕಡತ, ದಾಖಲೆಗಳನ್ನು ಆಧಾರದೊಂದಿಗೆ ಜೋಡಣೆಯ ಪ್ರಗತಿ ಮಾಹಿತಿ, ಜಾತಿ-ಆದಾಯ ಪ್ರಮಾಣ ಪತ್ರಗಳ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು.
ಸಿಂದಗಿ ಉಪನೊಂದಣಾಧಿಕಾರಿಗಳ ಕಚೇರಿ ಹಾಗೂ ಪುರಸಭೆ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಸುಧಾರಣೆಗೆ ಸಲಹೆ-ಸೂಚನೆಗಳನ್ನು ನೀಡಿದರು. ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.