ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.23 :ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೆಂಗಳೂರು ಪ್ರೀಡಮ್ ಪಾರ್ಕನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ವಿಜಯಪುರ ಜಿಲ್ಲಾಧ್ಯಕ್ಷ ವಿಜಯ ಪೂಜಾರ ಮಾತನಾಡಿ, ಭಾರತ ಕೃಷಿ ಪ್ರಧಾನವಾದ ದೇಶ. ಅತಿಹೆಚ್ಚು ಶೇ.80ರಷ್ಟು ಜನರು ಕೃಷಿಯನ್ನು ಅವಲಂಬಿಸಿ ತಮ್ಮ ಬದುಕನ್ನು ಕಟ್ಟಿಕೊಂಡಿರುತ್ತಾರೆ. ದೇಶದ ಒಟ್ಟು ಜನಸಂಖ್ಯೆ 135 ಕೋಟಿ ಇದ್ದು, ಈ ಪೈಕಿ 108 ಕೋಟಿ ಕೃಷಿಯಲ್ಲಿ ಅವಲಂಬಿತರಾಗಿರುತ್ತಾರೆ. ಏμÁ್ಯಖಂಡದಲ್ಲಿ ಸಮೃದ್ದವಾದ ಕೃಷಿ ಸಂಪನ್ಮೂಲ ನಮ್ಮ ಭಾರತ ದೇಶದಲ್ಲಿ ಇದೆ. ನೂರಾರು ನದಿಗಳಿವೆ ಮತ್ತು ಫಲವತ್ತಾದ ಭೂಮಿಯು ಇದೆ. ಆದರೂ ಭಾರತದ ರೈತ ಬಡವ. ಆಳುವ ಸರ್ಕಾರಗಳು ರೈತನನ್ನು ಒಂದು ರೀತಿ ದ್ವಿತೀಯ ದರ್ಜೆ ಪ್ರಜೆಯಂತೆ ಮಲತಾಯಿ ಧೋರಣೆ ಅನುಸರಿಸಿಕೊಂಡು ಬಂದು ಆತನನ್ನು ಬಡತನದ ಕೂಪದಲ್ಲಿ ತಳ್ಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತವಿರೋಧಿ ಕಾನೂನು ಜಾರಿ ಮಾಡಿ ಗಾಯದ ಮೇಲೆ ಬರೆಯಳೆದಂತೆ ಸದ್ಯದ ಪರಿಸ್ಥಿತಿಯಿದೆ. ಆದ ಕಾರಣ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಬೆಂಗಳೂರಿನಲ್ಲಿ ರೈತರ ಹಕ್ಕೊತ್ತಾಯದ ಮನವಿಪತ್ರವನ್ನು ಸಲ್ಲಿಸಲಾಯಿತು.
ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ಈಗಾಗಲೇ ಹಿಂಪಡೆದಿದ್ದು, ಆದರೆ ರಾಜ್ಯ ಸರ್ಕಾರ ವತಿಯಿಂದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದು ಆದೇಶ ಹೊರಡಿಸುವುದು. ರೈತ ಬೆಳೆದ ಬೆಳೆಗಳಿಗೆ ಕಾನೂನಾತ್ಮಕ ದರ ನಿಗದಿಪಡಿಸುವುದು ಹಾಗೂ ಡಾ.ಸ್ವಾಮಿನಾಥನ್ ವರದಿ ಜಾರಿಗೆಗೊಳಿಸುವುದು. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು. ಕೃಷ್ಣ ನದಿಯ ಆಲಮಟ್ಟಿ ಜಲಾಶಯದ ಎತ್ತರ 519 ರಿಂದ 524.256 ಮೀಟರ್‍ಕ್ಕೆ ಕೂಡಲೇ ಎತ್ತರಿಸುವುದು ಇವೇ ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಂಗಣ್ಣ ಬಾಗೇವಾಡಿ, ಈರನಗೌಡ ಬಿರಾದಾರ, ಗುರುಸಂಗಪ್ಪ ಹಂಡ್ರಗಲ್ಲ, ಅಕ್ಕಮ್ಮ ಇಲಕಲ, ಗಂಗಮ್ಮ ಬದಾಮಿ, ನಾಯ್ಕೋಡಿ ಮತ್ತಿತರರು ಉಪಸ್ಥಿತರಿದ್ದರು.