ಗುರುವೆಂದರೆ ಸದ್ವಿಚಾರ ಬಿತ್ತುವ ಸಂಜೀವಿನಿ: ಪ್ರಕಾಶ ಅಂಗಡಿ
ಸಂಜೆವಾಣಿ ವಾರ್ತೆ
ಕೆಂಭಾವಿ:ಜು.23:ಬದುಕಿಗೆ ದಾರಿದೀಪವಾಗಿ ಕತ್ತಲಿನಿಂದ ಬೆಳಕಿನಡೆಗೆ ಕರೆದುಕೊಂಡು ಹೋಗುವ , ಸುಜ್ಞಾನದ ಬೆಳಕು ಚೆಲ್ಲಿ, ಸದ್ಬುದ್ಧಿಯ, ಸದ್ವಿಚಾರ ಬಿತ್ತಿ, ಸನ್ಮಾರ್ಗದೆಡೆಗೆ ಕೊಂಡೊಯ್ಯುವ ಜೀವ ಸಂಕುಲದ ಸಂಜೀವಿನಿಯೇ ಸದ್ಗುರು ಎಂದು ಸುರಪುರ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.
ಪಟ್ಟಣದ ಶ್ರೀಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನದ ವತಿಯಿಂದ ರವಿವಾರ ಆಯೋಜಿಸಿದ್ದ ಮಾಸಿಕ ಹುಣ್ಣಿಮೆಯ, ಸಾಹಿತ್ಯ, ಸಂಸ್ಕøತಿ, ಸಂಗೀತ, ಶಿವಾನುಭವ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಾಸಿಕ ಹುಣ್ಣಿಮೆ ಕಾರ್ಯಕ್ರಮ ಒಂಬತ್ತು ವರ್ಷ, ಪೂರೈಸಿ 108 ನೇ ಮಾಸ ಪೂರೈಸುತ್ತಾ ದಶಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿರುವವುದು ಹೆಮ್ಮೆಯ ವಿಷಯ ಎಂದವರು, ಶಿವಾನುಭವ ಗೋಷ್ಠಿಯ ಜೊತೆ ಜೊತೆಗೆ ಕವಿ, ಕಲಾವಿದರನ್ನು, ಸಾಧಕರನ್ನು ಗುರುತಿಸಿ ಪೆÇ್ರೀತ್ಸಾಹಿಸುತ್ತಾ, ಸಾಹಿತಿಗಳಿಗೆ, ಬರಹಗಾರರಿಗೆ ಬೆನ್ನೆಲುಬಾಗಿ, ಶ್ರೀಮಠದ ಪ್ರಕಾಶನದಿಂದ ಮಸ್ತಕದ ಜ್ಞಾನವನ್ನು ಪುಸ್ತಕಗಳಲ್ಲಿ ಪ್ರಕಟಿಸಿ ಲೋಕಾರ್ಪಣೆ ಮಾಡುತ್ತಿರುವ ಜಿಲ್ಲೆಯ ಮುಂಚೂಣಿ ಮಠಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದರು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಷ ಬ್ರ ಚನ್ನಬಸವ ಶಿವಾಚಾರ್ಯರು, ನೊಂದು, ಬೆಂದು, ಬಳಲಿ ಬೆಂಡಾದ ಮನಗಳಿಗೆ ಜ್ಞಾನೋಪದೇಶ ನೀಡುವ, ಅದಮ್ಯ ಚೈತನ್ಯ ಸ್ವರೂಪಿ, ಬಯಸಿ ಬಂದ ಭಕ್ತರ ಭವರೋಗ ಕಳೆಯುವ ಅದ್ಭುತ ಶಕ್ತಿಯೇ ಗುರು ಎಂದು ಆಶಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸುರಪುರ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಪ್ರಕಾಶ ಅಂಗಡಿ ಕನ್ನೆಳ್ಳಿ ಹಾಗೂ ನಿರ್ದೇಶಕರಾದ ಡಿ ಸಿ ಪಾಟೀಲ್, ಮತ್ತು ವಚನ ಗಾಯನ ಮಾಡಿದ ಡಾ ಶಿವಾನಂದ ಆಲ್ಗೂರ ಸುಪುತ್ರಿ ಕುಮಾರಿ ಸಿಯಾ ರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು
ಗೌರವ ಉಪಸ್ಥಿತರಿದ್ದ ಹಿರಿಯ ಸಾಹಿತಿ ಲಿಂಗನಗೌಡ ಮಾಲಿ ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.. ಯಮನೇಶ ಯಾಳಗಿ ಹಾಗೂ ಶರಣಕುಮಾರ ಯಾಳಗ ಇವರಿಂದ ಅದ್ಭುತ ಸಂಗೀತ ಸುಧೆ ಕೇಳುಗರ ಕರ್ಣಗಳಿಗೆ ಆನಂದ ತಂದಿತ್ತು. ಡಾ ಯಂಕನಗೌಡ ಪಾಟೀಲ ನಿರೂಪಿಸಿ ವಂದಿಸಿದರು, ಇದೇ ವೇಳೆ ನಿಂಗನಗೌಡ ದೇಸಾಯಿ ಮಹಾದೇಪ್ಪ ವಜ್ಜಲ್, ಮಲ್ಲು ಬಾದ್ಯಾಪುರ, ವೀರಣ್ಣ ಕಲಿಕೇರಿ, ಮಲ್ಲನಗೌಡ ಪಾಟೀಲ, ಗುರು ಕುಲಕರ್ಣಿ, ಗುಡದಯ್ಯ ದಾವಣಗೆರೆ, ಪರಶುರಾಮ ನಾರಾಯಣಕರ್, ಪ್ರಶಾಂತ ಹಿರೇಮಠ, ಅಭಿಷೇಕ್ ಪಾಟೀಲ, ನಿಜಗುಣ ವಿಶ್ವಕರ್ಮ ಅವ್ವಣ್ಣ ಮಡಿವಾಳಕರ್, ಸೇರಿದಂತೆ ಮಹಿಳೆಯರು ಮಕ್ಕಳು ಸುತ್ತಮುತ್ತಲಿನ ಗ್ರಾಮಸ್ಥರು ಗುರು ಪೂರ್ಣಿಮೆಯಲ್ಲಿ ಭಾಗವಹಿಸಿ ಗುರುವಿನ ಆಶೀರ್ವಾದಕ್ಕೆ ಪಾತ್ರರಾದರು.