ಸಂಗೀತ ಕ್ಷೇತ್ರಕ್ಕೆ ಗಂಗೂಬಾಯಿ ಹಾನಗಲ್ ಕೊಡುಗೆ ಅಪಾರ
ಕಲಬುರಗಿ:ಜು.22:ವ್ಯಕ್ತಿಯಲ್ಲಿ ದೈಹಿಕ ಬದಲಾವಣೆಯೊಂದಿಗೆ ಮಾನಸಿಕ ಶಾಂತಿ ನೀಡುವ ಶಕ್ತಿ ಸಂಗೀತಕ್ಕಿದೆ. ಇಂದಿನ ಒತ್ತಡದ ಬದುಕಿನ ತೊಂದರೆಗೆ ಸಂಗೀತ ಆಲಿಸುವುದು ಅಗತ್ಯವಾಗಿದೆ. ಸಂಗೀತ ಕ್ಷೇತ್ರದ ಬೆಳವಣಿಗೆಗೆ ಇಡೀ ತಮ್ಮ ಜೀವನದುದ್ದಕ್ಕೂ ಸೇವೆಯನ್ನು ಸಲ್ಲಿಸಿ ನಮ್ಮ ನಾಡು ಹಾಗೂ ದೇಶದ ಕೀರ್ತಿಯನ್ನು ವಿಶ್ವವ್ಯಾಪಿ ಪಸರಿಸುವಂತೆ ಮಾಡಿದ ಸಂಗೀತ ದಿಗ್ಗಜೆ ಗಂಗೂಬಾಯಿ ಹಾನಗಲ್ ಕೊಡುಗೆ ಅಪಾರವಾಗಿದೆ ಎಂದು ಹಿರಿಯ ಸಂಗೀತ ಕಲಾವಿದ ಶರಣು ಕಾಂಬಳೆ ಹೇಳಿದರು.
ನಗರದ ಆಳಂದ ಚೆಕ್‍ಪೋಸ್ಟ್ ಸಮೀಪವಿರುವ ‘ಗಾನ ಗಂಧರ್ವ ಸಂಗೀತ ಪಾಠಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸೋಮವಾರ ಜರುಗಿದ ‘ಗಂಗೂಬಾಯಿ ಹಾನಗಲ್‍ರ 15ನೇ ಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, “ನನಗೆ ಸಂಗೀತವೇ ದೇವರು. ಆ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂದು ನಿರಂತರವಾಗಿ ಸಂಗೀತ ಅಭ್ಯಾಸ, ಸೇವೆಯನ್ನು ಮಾಡಿತ್ತೇನೆ” ಎಂಬ ಹಾನಗಲ್‍ರ ಮಾತು ಸಂಗೀತದ ಬಗ್ಗೆ ಅವರಿಗಿರುವ ಶೃದ್ಧೆ ತೋರಿಸುತ್ತದೆ. ಬೆಳಗಾಂವ ಕಾಂಗ್ರೆಸ್ ಅಧಿವೇಶನದಲ್ಲಿ ಇವರು ಬಾಲ್ಯದಲ್ಲಿರುವಾಗಲೇ ಸುಮಧುರವಾಗಿ ಹಾಡುವ ಮೂಲಕ ಗಾಂಧೀಜಿ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂದು ಅವರ ಜೀವನ-ಸಾಧನೆಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ನವಾಬಖಾನ್, ಹಣಮಂತ ಸಂಕನೂರ, ಶ್ರೀಶೈಲ್ ಘೋಡಕೆ, ಚಂದ್ರಕಾಂತ ಪಾಟೀಲ ಹಾಗೂ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳಿದ್ದರು.