ಸಾಲಬಾಧೆ: ವಿಷ ಕುಡಿದು ರೈತ ಆತ್ಮಹತ್ಯೆ
ಕಲಬುರಗಿ:ಜು.22: ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಮನನೊಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಸಂಭವಿಸಿದೆ.
ಮೃತನಿಗೆ ಶಿವಲಿಂಗಪ್ಪ ತಂದೆ ನಾಗಪ್ಪ ಜೇವರ್ಗಿ (60) ಎಂದು ಗುರುತಿಸಲಾಗಿದೆ. ಮೃತ ರೈತನ ಹೆಸರಿನಲ್ಲಿ ಎರಡು ಎಕರೆ ಮೂವತ್ತಾರು ಗುಂಟೆ ಜಮೀನಿದ್ದು ಅದರ ಮೇಲೆ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನೆಲೋಗಿ ಶಾಖೆಯಲ್ಲಿ ಕೃಷಿಗಾಗಿ ಒಂದು ಲಕ್ಷ ಎಪ್ಪತ್ತು ಸಾವಿರ ರೂ.ಗಳ ಸಾಲ ಮಾಡಿದ್ದ ಅದೇ ರೀತಿ ಗ್ರಾಮದಲ್ಲಿ ಖಾಸಗಿಯಾಗಿ ಐದು ಲಕ್ಷ ರೂ.ಗಳ ಸಾಲವನ್ನು ಪಡೆದುಕೊಂಡಿದ್ದನು. ಸಾಲಕ್ಕಾಗಿ ಭಯಗೊಂಡು ಸೋಮವಾರ ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದ.
ಕಳೆದ ಹತ್ತು ವರ್ಷಗಳ ಹಿಂದೆಯೇ ಮೃತನ ಪತ್ನಿ ನಿಧನಹೊಂದಿದ್ದು, ಮೂವರು ಪುತ್ರರನ್ನು ಬಿಟ್ಟು ಅಗಲಿದ್ದಾನೆ. ಈ ಕುರಿತು ಮೃತರ ಸಂಬಂಧಿ ಶರಣಬಸಪ್ಪ ಸಲಗರ್ ಅವರು ದೂರು ಸಲ್ಲಿಸಿದ್ದು, ನೆಲೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.