ರಾಡ್ ಕಳಚಿಬಿದ್ದು ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕನ ದುರ್ಮರಣ
ಕಲಬುರಗಿ:ಜು.22: ಸಿಮೆಂಟ್ ಕಾರ್ಖಾನೆಯಲ್ಲಿ ಬೃಹತ್ ಟ್ಯಾಂಕರ್ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ವೇಳೆ, ಕಬ್ಬಿಣದ ರಾಡೊಂದು ಕಳಚಿ ಬಿದ್ದು, ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಮೃತ ಕಾರ್ಮಿಕನನ್ನು ಜಾಖರ್ಂಡ್ ಮೂಲದ ರಾಜಕುಮಾರ್ (26) ಎಂದು ಗುರುತಿಸಲಾಗಿದೆ.
ಸೇಡಂ ಪಟ್ಟಣದಲ್ಲಿರುವ ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಸಂಭವಿಸಿರುವ ನಾಲ್ಕನೇ ಸಾವು ಇದಾಗಿದೆ. ಸರಿಯಾದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೇ ಇರುವ ಕಾರಣ, ಕಾರ್ಮಿಕರ ಸಾವುಗಳು ಸಂಭವಿಸುತ್ತಿವೆ ಎಂದು ಆರೋಪಿಸಲಾಗಿದೆ.
ಕಳೆದ ಎರಡು ತಿಂಗಳಲ್ಲಿ ಸಾವನ್ನಪ್ಪಿದ ನಾಲ್ವರು ಕಾರ್ಮಿಕರ ಪೈಕಿ, ಇಬ್ಬರು ತಾಲೂಕಿನವರೇ ಆಗಿದ್ದಾರೆ. ಓರ್ವ ಜಾಖರ್ಂಡ್ ಮೂಲದವರಾಗಿದ್ದು, ಮತ್ತೋರ್ವನ ಮೂಲ ತಿಳಿದುಬಂದಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ತಾಲ್ಲೂಕಿನ ಬೆನಕನಹಳ್ಳಿ ನಿವಾಸಿ ಇಂದ್ರಕುಮಾರ್ ಎಂಬವರು ಸಾವನ್ನಪ್ಪಿದ್ದರು. ಇದೀಗ, ರಾಜಕುಮಾರ್ ಸಾವಿಗೀಡಾಗಿದ್ದಾರೆ.
ಕಾರ್ಮಿಕ ರಾಜಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಸ್ಥಳೀಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕರನ್ನು ಬಲಿ ಪಡೆಯುತ್ತಿರುವ ಶ್ರೀ ಸಿಮೆಂಟ್ ಕಾರ್ಖಾನೆಯನ್ನು ಮುಚ್ಚಬೇಕೆಂದು ಸ್ಥಳೀಯರು ಹಾಗೂ ಹಲವಾರು ಗ್ರಾಮಗಳ ಜನರು ಆಗ್ರಹಿಸಿದ್ದಾರೆ. ಕಾರ್ಖಾನೆಯಿಂದಾಗುತ್ತಿರುವ ಅನಾಹುತಗಳ ಬಗ್ಗೆ ಹಲವು ಬಾರಿ ದೂರು ನೀಡಿದರೂ, ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿಲ್ಲವೆಂದು ಕಿಡಿಕಾರಿದ್ದಾರೆ.