ರಾಷ್ಟ್ರಧ್ವಜ ದೇಶದ ಸಾರ್ವಭೌಮತೆಯ ಸಂಕೇತ
ಕಲಬುರಗಿ:ಜು.22: ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ನಡುವೆ ಅಶೋಕ ಚಕ್ರವಿರುವ ಭಾರತ ದೇಶದ ತ್ರಿವರ್ಣ ಧ್ವಜವು ಭಾರತದಲ್ಲಿರುವ ಎಲ್ಲರಿಗೂ ಒಂದೇಯಾಗಿರುವ ಹೆಮ್ಮೆಯ, ಗೌರವ, ಸಮಾನತೆ ಹಾಗೂ ಸಾರ್ವಭೌಮತೆಯನ್ನು ಸಾರುವ ಚಿಹ್ನೆಯಾಗಿದೆ ಎಂದು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನವಾಬಖಾನ್ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ‘ಮುತ್ತಾ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ರಾಷ್ಟ್ರಧ್ವಜ ಸ್ವೀಕಾರ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಧ್ವಜಾವಂದನೆ ಸಲ್ಲಿಸಿ ಮಾತನಾಡಿದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ರಾಷ್ಟ್ರಧ್ವಜ, ಲಾಂಛನ ಸೇರಿದಂತೆ ದೇಶದ ಸಂಕೇತಗಳ ಬಗ್ಗೆ ವಿದ್ಯಾರ್ಥಿ ದೆಸೆಯಿಂದಲೇ ತಿಳಿದುಕೊಳ್ಳಬೇಕು. ಸಂವಿಧಾನ ರಚನಾ ಸಭೆಯು 1947ರ ಜುಲೈ-22ರಂದು ರಾಷ್ಟ್ರಧ್ವಜವನ್ನು ಅಂಗೀಕರಿಸಿದ ದಿನದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಆಂಧ್ರಪ್ರದೇಶದ ಪಿಂಗಾಲಿ ವೆಂಕಯ್ಯನವರು ಧ್ವಜದ ವಿನ್ಯಾಸಕಾರರಾಗಿದ್ದಾರೆ. ಧ್ವಜದ ಅವರೋಹಣ, ಆರೋಹಣ ಪದ್ಧತಿಯ ಬಗ್ಗೆ ಚೆನ್ನಾಗಿ ಅರಿಯಬೇಕು. ಯುವಕರು ದೇಶಪ್ರೇಮದಿಂದ ದೂರವಾಗಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಮುತ್ತಾ, ಶಿಕ್ಷಕರಾದ ವಿಶ್ವನಾಥ ನಂದರ್ಗಿ, ಪ್ರಮೋದ ಕುಲಕರ್ಣಿ, ಲಕ್ಷ್ಮೀ ಇಂಡಿ, ಅರವಿಂದ್, ಗುರುರಾಜ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.