24 ರಂದು ಬೆಂಗಳೂರಿಗೆ ರೈತರ ನಿಯೋಗ
ಕಲಬುರಗಿ,ಜು.22-ಮುಂಗಾರು ಅಧಿವೇಶನದಲ್ಲಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‍ಎಸ್) ಮತ್ತು ಜಲ್ ಸಮಿತಿ ಒಕ್ಕೂಟದ ನೇತೃತ್ವದಲ್ಲಿ ಜು.24 ರಂದು ಬೆಂಗಳೂರಿಗೆ ರೈತರ ನಿಯೋಗ ತೆರಳಲಿದೆ.
ಅಫಜಲಪುರ ಗೂಳ್ನೂರ ಮತ್ತು ಮೊನಟಗಾ ಬ್ರಿಜ್ ಕಂ ಬ್ಯಾರೆಜ್ ಕಾಮಗಾರಿ ಮುಗಿದಿದ್ದು, ಬ್ರಿಜ್ ಕಂ ಬ್ಯಾರೇಜ್‍ಗೆ ಗೇಟ್ ಕೂಡಿಸಿ ನೀರು ನಿಲ್ಲಿಸಬೇಕು, ಮುಳುಗಡೆ ಪ್ರದೇಶದ ರೈತರಿಗೆ ಪರಿಹಾರ ನೀಡಬೇಕು,
ಕಬ್ಬು ಬೆಳೆಗಾರರ 2022 ಮತ್ತು 2023ನೇ ಸಾಲಿನ ಕಬ್ಬು ಕಟಾವು ಮಾಡಿದ ಕಬ್ಬಿನ ಬಾಕಿ ಹಣ ಎಫ್‍ಆರ್‍ಪಿ ಪ್ರಕಾರ ಬಿಡುಗಡೆ ಮಾಡಬೇಕು, ರೇಣುಕಾ ಶುಗರ್ಸ್ ಹಾವಳಗಾ ಸಕ್ಕರೆ ಕಾರ್ಖಾನೆ ಪ್ರತಿ ರೈತರಿಂದ ಪ್ರತಿ ಟನ್ ಕಬ್ಬಿಗೆ 112 ರೂಪಾಯಿ ಬಾಕಿ ಉಳಿಸಿ ಕೊಂಡಿದ್ದು, ತಕ್ಷಣವೇ ಬಾಕಿ ಹಣ ರೈತರಿಗೆ ಕೊಡಬೇಕು,
ಅಫಜಲಪುರ ತಾಲೂಕಿನ ಕೆಪಿಆರ್ ಚಿಮಣಗೆರಾ ಸಕ್ಕರೆ ಕಾರ್ಖಾನೆಯು ಕಬ್ಬು ಬೆಳೆಗಾರರಿಗೆ ಕಳೆದ ವರ್ಷದ 2022 ಮತ್ತು 2023ನೇ ಸಾಲಿನ ಪ್ರತಿ ಟನ್ ಕಬ್ಬಿಗೆ 162 ರೂಪಾಯಿ ಬಾಕಿ ಹಣ ಉಳಿಸಿಕೊಂಡಿದ್ದು, ತಕ್ಷಣವೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ರೈತರ ನಿಯೋಗ ಸರ್ಕಾರವನ್ನು ಒತ್ತಾಯಿಸಲಿದೆ ಎಂದು ಕರ್ನಾಟಕ ಪ್ರಾಂತ ರೈರ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಅಫಜಲಪುರ ತಾಲ್ಲೂಕ ಅಧ್ಯಕ್ಷ ಸಿದ್ದರಾಮ ಎಸ್.ದಣ್ಣೂರ, ಅಫಜಲಪುರದ ಜಲ್ ಸಮಿತಿ ಒಕ್ಕೂಟದ ಕಾರ್ಯದರ್ಶಿ ಅಶೋಕ ಹೂಗಾರ ತಿಳಿಸಿದ್ದಾರೆ.