ಪರಿಶಿಷ್ಟರ ಹಣ ಗ್ಯಾರಂಟಿಗೆ ಬಳಕೆ ಖಂಡಿಸಿ ಪ್ರತಿಭಟನೆ
ಕಲಬುರಗಿ,ಜು.22-ಪರಿಶಿಷ್ಟರ ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿಗೆ ನಿಗದಿ ಮಾಡಿದ್ದ ರೂ.39121 ಕೋಟಿ ಮೊತ್ತದಲ್ಲಿ ರೂ.14282 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳ ಜಾರಿಗೆ ಬಳಕೆ ಮಾಡಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹಾಗೂ ಪರಿಶಿಷ್ಟ ವಿದ್ಯಾರ್ಥಿಗಳ ಪ್ರೋತ್ಸಾಹಧನ ಮತ್ತು ವಿದೇಶದಲ್ಲಿ ಸಂಶೋಧನಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಹಾಯಧನ ಕಡಿತಗೊಳಿಸಿರುವುದನ್ನು ಕೂಡಲೇ ರದ್ದು ಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ನೇತೃತ್ವದಲ್ಲಿ ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಇಂದು ಪ್ರತಿಭಟನೆ ನಡೆಸಲಾಯಿತು.
ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ, ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪೂರ, ಕಪೀಲ ಸಿಂಗೆ, ಸುಭಾಷ ಕಲ್ಮೋರೆ, ಪರಶುರಾಮ ರಾಜಾಪೂರ ಅವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸರ್ಕಾರ ಗ್ಯಾರಂಟಿ ಯೋಜನೆಗಳ ವೆಚ್ಚವನ್ನು ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿಗೆ ಮೀಸಲಾದ ಮೊತ್ತದಿಂದ ಭರಿಸುವುದನ್ನು ಕೂಡಲೇ ಕೈ ಬಿಡಬೇಕು, 2013ರ ಸೇಷನ್ 7 (ಡಿ) ರದ್ದು ಪಡಿಸಿದ ಹಾಗೆ 7 (ಸಿ)ಯನ್ನು ಕೂಡ ರದ್ದುಪಡಿಸಬೇಕು, ಪ.ಜಾ ಮತ್ತು ಪ.ಪಂ.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡುವ ಪ್ರೋತ್ಸಾಹ ಧನ ಮತ್ತು ವಿದೇಶದಲ್ಲಿ ಸಂಶೋಧನಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಹಾಯಧನ ಕಡಿತಗೊಳಿಸಿದನ್ನು ರದ್ದುಪಡಿಸಿ ಈ ಮೊದಲಿದ್ದ ನಿಯಮ ಯಥಾವತ್ತಾಗಿ ಜಾರಿ ಮಾಡಬೇಕು, ರಾಜ್ಯದಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು, ದಲಿತರ ಆರ್ಥಿಕ ಮತ್ತು ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗೆ ಎದುರಾಗಿರುವ ಸಮಸ್ಯೆಗಳ ಕುರಿತು ಒಂದು ವಾರಗಳ ಕಾಲ ವಿಶೇಷ ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ.