ಬಸ್ ಹತ್ತುವಾಗ 1.45 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು
ಕಲಬುರಗಿ,ಜು.22-ಮಹಿಳೆಯೊಬ್ಬರು ಬಸ್ ಹತ್ತುವಾಗ ಅವರ ಕೈಚೀಲದಲ್ಲಿದ್ದ 1.45 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ನಗದು ಹಣ ಕಳವು ಮಾಡಿರುವ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಈಚೆಗೆ ನಡೆದಿದೆ.
ಚಿತ್ತಾಪುರ ತಾಲ್ಲೂಕಿನ ಕರದಾಳ ಗ್ರಾಮದ ಶ್ರೀದೇವಿ ನೀಲಕಂಠ ಮಲ್ಕೂಡ ಎಂಬುವವರೆ ಚಿನ್ನಾಭರಣ ಕಳೆದುಕೊಂಡಿದ್ದಾರೆ.
ಸಂಬಂಧಿಕರ ಮನೆಯಲ್ಲಿ ಮದುವೆ ಇದ್ದ ಪ್ರಯುಕ್ತ ಶ್ರೀದೇವಿ ಅವರು ಜು.18 ರಂದು ಬಟ್ಟೆ ಹಾಗೂ ಇತರೆ ಸಾಮಾನುಗಳನ್ನು ಖರೀದಿಸಲೆಂದು ಕಲಬುರಗಿಗೆ ಬಂದಿದ್ದಾರೆ. ಬಟ್ಟೆ, ಇತರೆ ಸಾಮಾನುಗಳನ್ನು ಖರೀದಿ ಮಾಡಿಕೊಂಡು ಸಾಯಂಕಾಲ ಊರಿಗೆ ಹೋಗಲೆಂದು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತುತ್ತಿದ್ದ ವೇಳೆ ಅವರ ಕೈಚೀಲದಲ್ಲಿದ್ದ 80 ಸಾವಿರ ರೂ.ಮೌಲ್ಯದ 20 ಗ್ರಾಂ.ಬಂಗಾರದ ಎರಡೆಳೆಯ ಚೈನ್, 40 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಚೈನ್, 20 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ತಾಳಿ ಮತ್ತು 5 ಸಾವಿರ ರೂ.ನಗದು ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.