ರಾಸಾಯನಿಕ ಕಾರ್ಖಾನೆಗಳಿಂದ ಜನರ ಜೀವನಕ್ಕೆ ಕಂಟಕ
ಶಿವಶರಣ ಚಾಂಗಲೇರಿ
ಹುಮನಾಬಾದ್ :ಜು.22: ತಾಲೂಕಿನ ಮಾಣಿಕ ನಗರ ಗ್ರಾಮ ಪಂಚಾಯತ ವ್ಯಾಪ್ತಿಯ ರಾಷ್ಟಿಯ ಹೆದ್ದಾರಿ 65ರ ಬದಿಯ ಕೈಗಾರಿಕಾ ಪ್ರದೇಶದ ರಾಸಾಯನಿಕ ಕಾರ್ಖಾನೆಗಳಿಂದ ಹಳ್ಳಕ್ಕೆ ರಾಸಾಯನಿಕ ತ್ಯಾಜ್ಯ ಹರಿದು ಬಿಡುತ್ತಿರುವ ಕಾರಣ ಜನರ ಆರೋಗ್ಯಕರ ಜೀವನಕ್ಕೆ ಕಂಟಕವಾಗಿದೆ.
ಬಹುತೇಕ ರಾಸಾಯನಿಕ ಕಾರ್ಖಾನೆಗಳಲ್ಲಿ ಸಂಗ್ರಹಿಸಿಟ್ಟ ರಾಸಾಯನಿಕ ಮಿಶ್ರಿತ ತ್ಯಾಜ್ಯ ಪ್ರತಿವರ್ಷ ಮಳೆಗಾಲದಲ್ಲಿ ಗಡವಂತಿ ಹಾಗೂ ಮಾಣಿಕ ನಗರ ಹಳ್ಳದಲ್ಲಿ ಹರಿದು ಬಿಡಲಾಗುತ್ತಿದೆ. ಇದರಿಂದ ಮಾಣಿಕ ನಗರ, ಗಡವಂತಿ, ಬಸವಂತಪೂರ, ಮೊಳಕೇರಾ ಹಾಗೂ ಧುಮ್ಮನಸೂರ ಸೇರಿ ಹುಮನಾಬಾದ್ ಪಟ್ಟಣದ ಜನರು ಸಾಕಷ್ಟು ತೊಂದರೆ ಅನುಭವಿಸುವಂತ ವಾತವರಣ ನಿರ್ಮಾಣವಾಗಿದೆ.
2023ರ ವಿಧಾನ ಸಭಾ ಚುನಾವಣೆ ಪೂರ್ವದಲ್ಲಿ ರಾಸಾಯನಿಕ ಕಾರ್ಖಾನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ. ಸಿದ್ದು ಪಾಟೀಲ್ ಭರವಸೆ ನೀಡಿದರು. ಶಾಸಕರಾದ ಮೇಲೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರ್ಖಾನೆಗಳಿಂದ ಆಗುತ್ತಿರುವ ತೊಂದರೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಿದರು. ಆದರೆ ಇಲ್ಲಿಯ ವರೆಗೆ ಯಾವುದೇ ಪ್ರಯೋಜನೆ ಆಗಿಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆ ಗ್ರಾಸವಾಗಿದೆ.
ಮಾಜಿ ಸಚಿವ ರಾಜಶೇಖರ ಪಾಟೀಲ್ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಹಾಗೂ ಜಿಪಂ. ಮಾಜಿ ಸದಸ್ಯ ವೀರಣ್ಣ ಪಾಟೀಲ್ ಸೇರಿ ಕಾಂಗ್ರೆಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಕೈಗಾರಿಕಾ ಪ್ರದೇಶದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಸಾಯನಿಕ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮ್ಮದೇ ಕಾಂಗ್ರೆಸ್ ಸರಕಾರಕ್ಕೆ ಒತ್ತಾಯಿಸಿದರು ಕೂಡಾ ಕಾರ್ಖಾನೆಗಳು ಮಾತ್ರ ರಾಜಾರೋಷವಾಗಿ ನಡೆಯುತ್ತಿವೆ.
ಕಾನೂನು ಬಾಹಿರ ಕಾರ್ಖಾನೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ದೂರು ನೀಡಿದ ಹಿನ್ನಲೆ ಅಧಿಕಾರಿಗಳು ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ಹೋಗುತ್ತಾರೆ. ಆದರೆ ಇಲ್ಲಿಯ ವರೆಗೆ ಹುಮನಾಬಾದ್ ಸೇರಿದಂತೆ ಗ್ರಾಮೀಣ ಭಾಗದ ಮಾಣಿಕ ನಗರ, ಗಡವಂತಿ, ಧುಮ್ಮನಸೂರ ಸೇರಿ ಬಹುತೇಕ ಗ್ರಾಮಗಳ ಜನರಿಗೆ ಮಾತ್ರ ಶಾಶ್ವತ ಪರಿಹಾರ ದೊರೆತಿಲ್ಲ. ಇವು ಎಲ್ಲವೂ ನೋಡಿದರೆ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನುವ ಅನೇಕ ಅನುಮಾನಗಳು ಹುಟ್ಟು ಹಾಕುತ್ತಿವೆ.
ಜನರ ಆರೋಗ್ಯ ಹಿತದೃಷ್ಠಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ತಮ್ಮ ಅಧಿಕಾರಿಗಳ ತಂಡದೊಂದಿಗೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಿ ಪರಿಸರ ಹಾಳು ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಜರುಗಿಸಿ ಈ ಭಾಗದ ಜನರಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಬಜರಂಗ ತಿವಾರಿ ಸೇರಿ ಅನೇಕರು ಒತ್ತಾಯಿಸಿದ್ದಾರೆ.
ಕೈಗಾರಿಕಾ ಪ್ರದೇಶ ರಾಸಾಯನಿಕ ಕಾರ್ಖಾನೆಗಳಿಂದ ಆಗುತ್ತಿರುವ ಸಮಸ್ಯೆಗಳಿಗೆ ಕಡಿವಾಣ ಹಾಕುವಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ನಿರ್ಲಕ್ಷ?? ವಹಿಸುತ್ತಿದ್ದಾರೆ. ಹೀಗಾಗಿ ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಇತ್ತ ಹೆಚ್ಚಿನ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಮನೋಜ ಸೀತಾಳೆ
ಜಿಲ್ಲಾಧ್ಯಕ್ಷ
ಕಲ್ಯಾಣ ಕರ್ನಾಟಕ ವಿದ್ಯಾರ್ಥಿ ವೇದಿಕೆ, ಬೀದರ್
ಹುಮನಾಬಾದ್ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ವಿರುದ್ಧ ಬರುತ್ತಿರುವ ದೂರಗಳ ಕುರಿತು ತಹಸೀಲ್ದಾರ್ ಜತೆಯಲ್ಲಿ ಚರ್ಚಿಸಿದ್ದೇನೆ. ಹಳ್ಳದ ನೀರು ಪರೀಕ್ಷೆಗೆ ಒಳಪಡಿಸಿ ವರದಿ ಬಂದ ನಂತರ ಸೂಕ್ತ ಕಾನೂನು ಕ್ರಮ ಕೈಗೊಂಡು ಇಲ್ಲಿನ ಜನರಿಗೆ ಪರಿಹಾರ ನೀಡಲಾಗುವುದು.
ಶಿಲ್ಪಾ ಶರ್ಮಾ
ಜಿಲ್ಲಾಧಿಕಾರಿ, ಬೀದರ