ವೈಯಕ್ತಿಕ ವಿಚಾರಕ್ಕಿಂತ ಸಾಮಾಜಿಕ ಬದ್ಧತೆ ಮುಖ್ಯ: ಟಿ.ವ್ಹಿ ಶಿವಾನಂದನ್
ಬೀದರ:ಜು.22:ಪತ್ರಕರ್ತರು ಒತ್ತಡದ ಬದುಕಿನಲ್ಲಿ ಸಿಲುಕಿಕೊಂಡು ಸ್ವಾತಂತ್ರ್ಯ ಕಳೆದು ಕೊಂಡಿರುವುದು ಇಂದಿನ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿರುವುದು ಒಂದು ವಿಪರ್ಯಾಸದ ಸಂಗತಿಯೆಂದು ಕಲಬುರಗಿ ಶರಣಬಸವೇಶ್ವರ ವಿಶ್ವವಿದ್ಯಾಲಯದ ಪತ್ರಿಕಾ ವಿಭಾಗದ ಮುಖ್ಯಸ್ಥರಾದ ಪ್ರೊ. ಟಿ.ವ್ಹಿ ಶಿವಾನಂದನ್ ಅಭಿಪ್ರಾಯಪಟ್ಟರು.
ನಗರದ ಪೋಲಾ ಕನ್‍ವೆನ್‍ಷನ್ ಹಾಲ್‍ನಲ್ಲಿ ವಚನ ಚಾರಿಟೇಬಲ್ ಸೊಸೈಟಿ ಬೀದರ ಅವರು ಆಯೋಜಿಸಿರುವ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಚನಾನುಭವ ಎಲ್‍ಎಲ್‍ಪಿ ಉದ್ಘಾಟನೆ ಮಾಡಿದ ಪ್ರೊ. ಟಿ.ವಿ. ಶಿವಾನಂದನ್ ಮಾತನಾಡುತ್ತ ಇಂದಿನ ಪತ್ರಿಕೆಗಳು ನೈಜ ಸುದ್ದಿಗಳಿಂದ ಬಲುದೂರ ಹೋಗುತ್ತಿವೆ. ಒಂದು ಕಾಲದಲ್ಲಿ ಪತ್ರಿಕೆಯಲ್ಲಿ ಬಂದ ವರದಿ ಸರಕಾರದ ಕಣ್ಣುತೆರೆಸಿ ಅನೇಕ ಯೋಜನೆಗಳು ಬದಲಾಯಿಸಿರುವ ಉದಾಹರಣೆಗೆ ಕಡಿಮೆಯೆನಿಲ್ಲ. ಇಂದಿನ ರಾಜಕೀಯ ಮುತ್ಸದ್ದಿಗಳು, ಕೈಗಾರಿಕೆ ಉದ್ಯಮಿಗಳು ಪತ್ರಿಕೆಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತಿವೆ. ಇಂಥ ಸ್ಥಿತಿಯಲ್ಲು ಬೆರಳೆಣಿಕೆ ಪತ್ರಿಕೆಗಳು ತಮ್ಮ ಭದ್ಧತೆ ಉಳಿಸಿಕೊಂಡಿವೆ. ಪತ್ರಿಕೆಯ ಮೌಲ್ಯ ಓದುಗರ ಅಭಿಲಾಶೆ ಕೊಂಡಿಯಾಗಿ ಪತ್ರಕರ್ತರಾದವರು ಕೆಲಸನಿರ್ವಹಿಸಬೇಕೆಂದು ಸಲಹೆ ನೀಡಿದರು. ಪತ್ರಿಕೆಯಲ್ಲಿ ಗೊಯಂಕ, ಹಾಗೂ ಏನ್ ರಾಮ್ ಅವರ ದೂರದೃಷ್ಟಿ ಇಂದು ಕೂಡ ನೆನಪಿಗೆ ಬರುತ್ತದೆ. ಅವರ ಜೀವನ ಒಂದು ಆದರ್ಶ ಇಂದಿನ ವಾಸ್ತವ್ಯ ಸ್ಥಿತಿ ಗಂಭೀರವಾದರೂ ಪ್ರಾಮಾಣಿಕ ಕೆಲಸಕ್ಕೆ ಅತೀವ ಗೌರವವಿದೆಯೆಂಬುವುದು ಬಿಚ್ಚಿಹೇಳಬೇಕಾಗಿಲ್ಲ. ಪತ್ರಿಕೆ ಇಡೀ ವ್ಯವಸ್ಥೆಯ ಕನ್ನಡಿ ಅದು ಅಚ್ಚುಕಟ್ಟಾಗಿ ನಿರ್ವಹಿಸಿದರೆ ಪ್ರಜಾ ಪ್ರಭುತ್ವಕ್ಕೊಂದು ಮೌಲ್ಯಯೆಂದು ಉದ್ಘಾಟನೆಯಲ್ಲಿ ತಮ್ಮ ಅನುಭವ ಹಂಚಿಕೊಂಡರು.
ಹಿರಿಯ ಪತ್ರಕರ್ತರಾದ ಸದಾನಂದ ಜೋಶಿ ಮುಖ್ಯ ಅತಿಥಿಗಳಾಗಿ ಸಮಾಜದ ಎಲ್ಲಾ ಹಂತದ ಬದಲಾವಣೆಗೆ ಪತ್ರಿಕೆ ಪಾತ್ರ ಬಹುಮುಖ್ಯ. ಆದರೆ ಇಂದು ಒಬ್ಬರ ಮುಲಾಜಿಗೆ ಒಳಪಟ್ಟು ಪತ್ರಿಕಾ ಸ್ವಾತಂತ್ರ್ಯ ಹರಣವಾಗುತ್ತಿದೆ. ಇದು ಮುಂಬರುವ ದಿನಗಳಲ್ಲಿ ಮಾರಕವಾಗಿ ಪರಿಣಮಿಸಬಹುದಾಗಿದೆ. ಪತ್ರಕರ್ತರಲ್ಲಿ ತುಡಿತ ಇದೆ, ವಿಚಾರವಿದೆ, ಆಕ್ರೋಶವಿದೆ ಆದರೆ ಬರೆಯ ಬೇಕೆಂದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತಿದೆ. ಇಂದು ಪತ್ರಿಕೆಯ ಲಾಭ ನಷ್ಠದ ಗೋಜಿಗೆ ಸಿಲುಕಿ ತನ್ನ ನೈಜ ಧ್ವನಿ ಕಳೆದುಕೊಂಡಿದೆ. ಜಾಹೀರಾತಿನ ನಿಲುವು ದಿನೆ ದಿನೆ ಹೆಚ್ಚಾಗುತ್ತಿರುವುದರಿಂದ ಮಾಧ್ಯಮಕ್ಕೆ ಸಂಕ್ರಮಣಕಾಲ ಬರುತ್ತಿದೆ. ಪತ್ರಕರ್ತರಾದವರು ತಾಳ್ಮೆ, ಸಹನೆ, ಸಮಾಜದ ಅಭಿವೃದ್ಧಿಯ ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಬೇಕೆಂದು ಹೇಳಿದರು.
ಕನ್ನಡ ಪ್ರಭ ಕಲಬುರಗಿ ಆವೃತ್ತಿ ಮುಖ್ಯಸ್ಥರಾದ ಅಪ್ಪರಾವ ಸೌದಿ ಮುಖ್ಯ ಅತಿಥಿಗಳಾಗಿ ವಚನ ಚಾರಿಟೇಬಲ್ ಸೊಸೈಟಿ ಸಮಾನ ಮನಸ್ಕರೆಲ್ಲರೂ ಸೇರಿಕೊಂಡು ಸಾಮಾಜಿಕ, ಶೈಕ್ಷಣಿಕ, ಪರಿಸರ ಅಭಿವೃದ್ಧಿಗಾಗಿ ತನ್ನದೆ ಆದ ದಿಸೆಯಲ್ಲಿ ಕೆಲಸಮಾಡುತ್ತಿರುವ ಅವರ ಸಾಮಾಜಿಕ ಕಳಕಳಿ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ವಚನ ಮಿಡಿಯಾ ಹೌಸ ವ್ಯವಸ್ಥಾಪಕ ನಿರ್ದೇಶಕರು ಪ್ರೊ. ಸಿದ್ದು ಯಾಪಲಪರವಿ ಅಧ್ಯಕ್ಷತೆ ವಹಿಸಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪ್ರಾಮುಖ್ಯವಾದ ಸ್ಥಾನ ಕಲ್ಪಿಸಲಾಗಿದೆ. ಆದರೆ ಪತ್ರಿಕಾ ರಂಗಕ್ಕೂ ಅಷ್ಟೆ ಗೌರವವಿದೆ ಎಂಬುವುದು ನೆನಪಿಡಬೇಕಾಗಿದೆ. ಯಾವುದೇ ರಂಗದಲ್ಲಿ ಒಳ್ಳೆಯ ಕೆಲಸವಾಗಬೇಕಾದರೆ ಮೌಲ್ಯಯುತವಾದ ಪತ್ರಿಕೆಯ ಬರಹಗಳಿಂದ/ ವರದಿಗಳಿಂದ ಅದನ್ನು ತಹಬದಿಗೆ ತರಬಹುದೆಂದು ನುಡಿದರು. ವಚನ ಸಮೂಹ ಸಂಸ್ಥೆ ಸಹ ಮಾದ್ಯಮದಲ್ಲಿ ದಾಪುಗಾಲು ಹಾಕುತ್ತಿದೆ. ಸಮಾಜದ ಓರೆ ಕೋರೆಗಳನ್ನು ತಿದ್ದಿ ತತ್ವಧಾರಿತ ಮೌಲ್ಯ ಸುದ್ದಿ ಜನಮಾನಸ ಲೋಕಕ್ಕೆ ಮುಟ್ಟಿಸುವ ಪ್ರಮುಖ ಜವಾಬ್ದಾರಿ ಹೊಂದಲಾಗಿದೆ ಎಂದು ನುಡಿದರು. ಎಲ್‍ಎಲ್‍ಪಿ ಹೊಸ ಯೋಜನೆಯ ಬಗ್ಗೆ ಅಲ್ಲಮಪ್ರಭು ನಾವದಗೇರೆ ಮಾಹಿತಿ ನೀಡಿದರು. ನಿರ್ದೇಶಕರಾದ ಪ್ರಕಾಶ ಗಂದಿಗುಡೆ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿರುವ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು ಹುಲಸೂರ ಆಶೀರ್ವಚನ ನೀಡುತ್ತ ಇಂದು ಪತ್ರಕರ್ತರ ಸೇವೆ ವರ್ಣಿಸಲು ಸಾಧ್ಯವಿಲ್ಲ. ಚಳಿ, ಮಳೆ, ಬಿಸಿಲೆನ್ನದೇ ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಂಡು ಸಮಾಜಕ್ಕೆ ಸುದ್ದಿ ಮುಟ್ಟಿಸುವ ಕಾರ್ಯ ಸ್ಮರಣೀಯ, ಸರಕಾರ ಚಿಕ್ಕ ಚಿಕ್ಕ ಪತ್ರಿಕೆ ವಿತರಕರನ್ನು, ವರದಿಗಾರರಿಗೆ ಸಹಾಯ ಸಹಕಾರ ನೀಡಿ ಅವರ ಬದುಕಿಗೆ ಇಂಬು ನೀಡಬೇಕೆಂದು ಸರಕಾರಕ್ಕೆ ಮನವಿ ಮಾಡಿದರು.
ವಚನ ಚಾರಿಟೇಬಲ್ ಸೊಸೈಟಿಯ ನಿಕಟಪೂರ್ವ ಅಧ್ಯಕ್ಷೆ ಲಿಂಗಾರತಿ ಅಲ್ಲಮಪ್ರಭು ನಾವದಗೇರೆ ಸೊಸೈಟಿಯ ವರದಿ ವಾಚನ ಮಾಡಿ ಅಧಿಕಾರವನ್ನು ಡಾ. ಸುರೇಶ ಪಾಟೀಲ ನೂತನ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ವೈಜಿನಾಥ ಸಜ್ಜನಶೆಟ್ಟಿ ಕನ್ನಡ ಭಾವ ಗೀತೆಗಳನ್ನು ಹಾಡಿ ಮನರಂಜಿಸಿದರು. ಮೊದಲಿಗೆ ವಚನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಶಿವಕುಮಾರ ಸಾಲಿ ಸ್ವಾಗತಿಸಿದರೆ, ಜಗನ್ನಾಥ ಶಿವಯೋಗಿ ವಂದಿಸಿದರೆ, ಶಿವಶಂಕರ ಟೋಕರೆ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಬೀದರ ಜಿಲ್ಲೆಯ ಪತ್ರಿಕೆ ವಿತರಣೆ ಮಾಡುವ 48 ಯುವಕರಿಗೆ ಜಾಕೆಟ್, 12 ಜನ ಹೆಮ್ಮೆಯ ಪತ್ರಿಕಾ ವಿತರಕರಿಗೆ, 5 ಜನ ಜಾಹೀರಾತು ಪ್ರತಿ ನಿಧಿಗಳಿಗೆ ಹಾಗೂ 3 ಜನ ಪ್ರಸರಾಂಗ ಪ್ರತಿನಿಧಿಗಳಿಗೆ ಹಾಗೂ 38 ಜನ ಹಿರಿಯ ಪತ್ರಿಕಾ ಸಂಪಾದಕ/ವರದಿಗಾರರಿಗೆ ಸಮಾರಂಭದಲ್ಲಿ ನೆನಪಿನ ಕಾಣಿಕೆ ಹಾಗೂ ಶಾಲು ಹೊದಿಸಿ ಗೌರವಿಸಲಾಯಿತು.