ಆಗಷ್ಟ್ ಮಾಸಾಂತ್ಯಕ್ಕೆ 8ನೇ ತಾಲೂಕಾ ಸಾಹಿತ್ಯ ಸಮ್ಮೇಳನಕ್ಕೆ ನಿರ್ಧಾರ
ಕಲಬುರಗಿ:ಜು.22: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಆಗಷ್ಟ್ ಮಾಸಾಂತ್ಯಕ್ಕೆ ಕಲಬುರಗಿ ತಾಲೂಕಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ತಿಳಿಸಿದ್ದಾರೆ.
ವೈವಿಧ್ಯಮಯ ಗೋಷ್ಠಿಗಳನ್ನೊಳಗೊಂಡ ಒಂದು ದಿನದ ಸಮ್ಮೇಳನವನ್ನು ಆಯೋಜಿಸಿ ಕಲೆ, ಸಾಹಿತ್ಯ, ಸಂಗೀತ, ಪರಂಪರೆಗಳ ಕುರಿತಾದ ಅನೇಕ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಮತ್ತು ಕವಿಗೋಷ್ಠಿ ಸೇರಿದಂತೆ ಅರ್ಥಪೂರ್ಣ ಸಮ್ಮೇಳನವೊಂದನ್ನು ನಡೆಸಲು ನಗರದ ಕನ್ನಡ ಭವನದಲ್ಲಿ ನಡೆದ ತಾಲೂಕಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಸಮ್ಮೇಳನದ ಸವಿನೆನಪಿನಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರುಗಳ ಬದುಕು-ಬರಹ ಮತ್ತು ಸಾಧನೆಗಳ ಕುರಿತಾದ ಪುಸ್ತಕವನ್ನು ಪ್ರಕಟಿಸಲು ಸಹ ನಿರ್ಧಾರ ತೆಗೆದುಕೊಳ್ಳಲಾಯಿತು.
ಸಮ್ಮೇಳನದ ಯಶಸ್ವಿಗೆ ಪೂರಕವಾಗಿ ಸ್ವಾಗತ ಸಮಿತಿ ಮತ್ತು ಸಮ್ಮೇಳನಾಧ್ಯಕ್ಷರ ಆಯ್ಕೆ ಮುಂದಿನ ದಿನಗಳಲ್ಲಿ ಮಾಡಲಾಗುವುದು. ಸಮ್ಮೇಳನವನ್ನು ಇನ್ನಷ್ಟು ಅರ್ಥಪೂರ್ಣವಾಗಿ ನಡೆಸಲು ಈಗಾಗಲೇ ಸಕಲ ಸಿದ್ಧತೆಗಳು ಕೈಗೊಳ್ಳಲಾಗಿದೆ ಎಂದು ಸಜ್ಜನಶೆಟ್ಟಿ ಅವರು ವಿವರಿಸಿದರು.
ತಾಲೂಕಾ ಕಸಾಪ ಗೌರವ ಕಾರ್ಯದರ್ಶಿಗಳಾದ ವಿಶ್ವನಾಥ ಸಿ ಯನಗುಂಟಿ, ವಿಶಾಲಾಕ್ಷಿ ಮಾಯಣ್ಣವರ, ಕೋಶಾಧ್ಯಕ್ಷ ಕುಪೇಂದ್ರ ಬರಗಾಲಿ, ಪ್ರಮುಖರಾದ ಮಲ್ಲಿಕಾರ್ಜುನ ಇಬ್ರಾಹಿಂಪುರ, ಭಾಗ್ಯಶ್ರೀ ಮರಗೋಳ, ಕವಿತಾ ಕವಳೆ, ಶರಣಕುಮಾರ ಎಂ ಹಾಗರಗುಂಡಗಿ, ವಿಜಯಕುಮಾರ ಹಾಬಾನೂರ, ರೇವಯ್ಯಾಸ್ವಾಮಿ ಸರಡಗಿ, ರೇವಣಸಿದ್ದಪ್ಪ ಗುಂಡಗುರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.