ಬದುಕಿನ ಸಾರ್ಥಕತೆಗೆ ಗುರುವಿನ ಮಾರ್ಗದರ್ಶನ ಅಗತ್ಯ
ಭಾಲ್ಕಿ:ಜು.22:ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ ಗುರುಪೂರ್ಣಿಮೆ ಸಂಭ್ರಮದಿಂದ ಆಚರಿಸಲಾಯಿತು. ಗ್ರಾಮದ ಜಗದ್ಗುರು ನಿರಂಜನ ಸಂಸ್ಥಾನ ಮಠದಲ್ಲಿ ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ವಚನಾಭಿಷೇಕ, ವಚನ ಪಾರಾಯಣ ಭಕ್ತರು ಶ್ರದ್ಧೆ, ಭಕ್ತಿಯಿಂದ ನೆರವೇರಿಸಿ ಕೊಟ್ಟರು.
ಜಿಲ್ಲೆ ಸೇರಿ ನೆರೆಯ ತೆಲಂಗಾಣ, ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದ ಭಕ್ತರಿಗೆ ಜಗದ್ಗುರು ನಿರಂಜನ ಸಂಸ್ಥಾನ ಮಠದ ಜಗದ್ಗುರು ಶಿವಯೋಗೀಶ್ವರ ಸ್ವಾಮೀಜಿ ಅವರು ಆಶೀರ್ವಾದ ಕಲ್ಪಿಸಿ, ವ್ಯಕ್ತಿಯ ಬದುಕಿನ ಸಾರ್ಥಕತೆಗೆ ಗುರುವಿನ ಮಾರ್ಗದರ್ಶನ ಅಗತ್ಯ. ಮನುಷ್ಯನಲ್ಲಿರುವ ದುರ್ಗುಣಗಳನ್ನು ತೊಡೆದು ಹಾಕಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಮಹತ್ವದ್ದು, ಜೀವನದಲ್ಲಿ ಅಚಲವಾದದ್ದನ್ನು ಸಾಧಿಸಲು ಗುರಿ ಇಟ್ಟುಕೊಳ್ಳಬೇಕು. ಆ ಗುರಿ ತಲುಪಲು ಗುರುವಿನ ಮಾರ್ಗದರ್ಶನ ಪಡೆದರೆ ಯಶಸ್ಸು ಖಚಿತ. ಪ್ರತಿಯೊಬ್ಬರೂ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದು ಬದುಕು ಸಾರ್ಥಕತೆಯನ್ನಾಗಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.