ಎರಡು ನೂರಕ್ಕೂ ಹೆಚ್ಚು ವಚನಗಳನ್ನು ರಚಿಸಿದವರು ಹಡಪದ ಅಪ್ಪಣ್ಣ
ಸಂಜೆವಾಣಿ ವಾರ್ತೆ
ಬಳ್ಳಾರಿ,ಜು,22-  ಬಸವಣ್ಣನವರ ಅಪ್ಪಟ ಅನುಯಾಯಿಗಳು ಹಾಗೂ ಅನುಭವ ಮಂಟಪದ ಕಾರ್ಯದರ್ಶಿಯಾಗಿ ಕಾಯಕದ  ಮಹತ್ವ ಸಾರುವಂತಹ ಎರಡು ನೂರಕ್ಕೂ ಹೆಚ್ಚು ವಚನಗಳನ್ನು ರಚಿಸಿದವರು ಅಪ್ಪಣ್ಣನವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು ಹನ್ನೆರಡನೆಯ ಶತಮಾನದಲ್ಲಿ ಆಚರಣೆಯಲ್ಲಿದ್ದ ಜಾತಿ ವ್ಯವಸ್ಥೆ ಹಾಗೂ ಹಡಪದ ಜನ ಎದುರು ಬಂದರೆ ಅಪಶಕುನ ಎಂಬ ಮೂಢನಂಬಿಕೆ ಹೋಗಲಾಡಿಸಲು ಪಣತೊಟ್ಟ ಬಸವಣ್ಣನವರು,ಪ್ರತಿ ದಿನ ಅನುಭವ ಮಂಟಪಕ್ಕೆ ಬರುವ ಶರಣರು ಮೊದಲು ಅಪ್ಪಣ್ಣನವರ ದರ್ಶನ ಪಡೆದು ಬರುವಂತೆ ಕಟ್ಟಪ್ಪಣೆ ಮಾಡಿದ್ದರು.
ಇದನ್ನು ಅರಿತ ಅಪ್ಪಣ್ಣ ಕಷ್ಟ ಜೀವಿಗಳಾಗಿ ದುಡಿಯುತ್ತಾ,ವಚನಗಳನ್ನು ರಚಿಸಿದರು. ಅವರ ವಚನಗಳಲ್ಲಿ ಪ್ರತಿಯೊಬ್ಬರು ಕಷ್ಟ ಪಟ್ಟು ದುಡಿದಾಗ ಮಾತ್ರ ಜೀವನದಲ್ಲಿ ಸುಖಕಾಣಲು ಸಾಧ್ಯ ಎಂದು ಸಾರಿದರು.
ಆದ್ದರಿಂದ ವಿದ್ಯಾರ್ಥಿಗಳು ಮೂಢನಂಬಿಕೆ ಬಿಟ್ಟು  ಅಪ್ಪಣ್ಣನವರ ಆದರ್ಶ ಗುಣಗಳನ್ನು ಅರಿತು ಕಷ್ಟ ಪಟ್ಟು ಓದಿ ಯಶಸ್ಸು ಗಳಿಸಬೇಕು ಎಂದು ಹೇಳಿದರು.
ಶಿಕ್ಷಕರಾದ ವಿ.ಬಸವರಾಜ, ದಿಲ್ಷಾದ್ ಬೇಗಂ,ಸುಧಾ,ಶ್ವೇತಾ, ಉಮ್ಮೇಹಾನಿ,ಶಶಮ್ಮ, ಗುರುಪ್ರಸಾದ್ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಅನುಷ,ಲಾವಣ್ಯ, ಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.