ಸಿರುಗುಪ್ಪ: ಅಕ್ರಮ ಮರಳು ದಂಧೆಯ ಮೇಲೆ ಪೊಲೀಸ್ ರೈಡ್  ಜೆಸಿಬಿ ಟ್ರಾಕ್ಟರ್ ಗಳ ವಶ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಜು 22 :  ಇಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ  ಸ್ಥಳೀಯ ಶಾಸಕರ ಮತ್ತು ಪೊಲೀಸ್ ಅಧಿಕಾರಿಗಳ  ಬೆಂಬಲದಿಂದ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ನೂತನ ಎಸ್ಪಿಯವರ ಆದೇಶದಂತೆ ಕಡಿವಾಣ  ಹಾಕುವ ಪ್ರಯತ್ನ ನಿನ್ನೆ ಮಧ್ಯರಾತ್ರಿ ನಡೆದಿದೆ.
ಹಚ್ಚೊಳಿ ಬಳಿ ನದಿಯಲ್ಲಿನ ಮರಳನ್ನು ಸಾಗಿಸುತ್ತಿದ್ದ ಎರೆಡು ಜೆಸಿಬಿ, ನಾಲ್ಕು ಟ್ರಾಕ್ಟರ್ ಗಳನ್ನು ಬಳ್ಳಾರಿಯಿಂದ ಎಸ್ಪಿಯವರ ಆದೇಶದಂತೆ ತೆರಳಿದ ಪೊಲೀಸ್ ತಂಡ ವಶಪಡಿಸಿಕೊಂಡಿದೆಯಂತೆ. ಅಲ್ಲದೆ ಸಿರಿಗೇರಿ ಬಳಿ ಸಹ ಇದೇ ರೀತಿ 2 ಟ್ರಾಕ್ಟರ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರಂತೆ.
ಹೊಸದಾಗಿ ಬಂದಿರುವ ಎಸ್ಪಿಯವರು ನಾನು ಅಕ್ರಮ ಸಹಿಸಲ್ಲ ಎಂಬ ಸಂದೇಶ ನೀಡಲು ಇದನ್ನು ಮಾಡಿದ್ದಾರ ಅಥವಾ ನನ್ನ‌ ಗಮನಕ್ಕೆ ಇಲ್ಲದೆ ಮಾಡುತ್ತದೆಯೋ ಎಂದೋ ಒಟ್ಟಿನಲ್ಲಿ ಅಕ್ರಮ ದಂಧೆಗೆ ದಾಳಿ‌ ನಡೆದಿದೆ. ಮುಂದೆ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಈ ದಂಧೆ ನಡೆಯುತ್ತಿದ್ದು ಮಾತ್ರ ಶಾಸಕನ ಆಪ್ತ ಮತ್ತು ಸ್ಥಳೀಯ ಉನ್ನತ ಪೊಲೀಸ್ ಅಧಿಕಾರಿಯ ಬೆಂಬಲದಿಂದಲೇ ನಡೆಯಿತ್ತಂತೆ. ನಿನ್ನೆ ಹಿಡಿದ ಟ್ರಾಕ್ಟರ್ ಚಾಲಕರು ನಾವು ನಿಮ್ಮ‌ ಪೊಲೀಸ್ ಅಧಿಕಾರಿ ಜೊತೆ ಮಾತನಾಡಿ ತಿಂಗಳ ಮಾಮೂಲು ಮಾತಾಡಿಯೇ ಮುಂದುವರೆದಿದ್ದೇವೆ. ಮತ್ಯಾಕೆ ಹಿಡಿಯುತ್ತೀರಿ ಎಂದು ದಾಳಿ ಮಾಡಿದ ಪೊಲೀಸರನ್ನೇ ಪ್ರಶ್ನಿಸಿದ್ದಾರಂತೆ.
ಬಳ್ಳಾರಿ ತಾಲೂಕಿನ ಪಿ.ಡಿ.ಹಳ್ಳಿ ವ್ಯಾಪ್ತಿಯಲ್ಲಿಯೂ ಸಂಜೆ ನಂತರ ಟ್ರಾಕ್ಟರ್ ಗಳಲ್ಲಿ ಮರಳು ಸಾಗಾಣಿಕೆ ನಡೆಯುತ್ತಿದೆ. ಇದರ ಮೇಲೂ ಎಸ್ಪಿಯವರು ಕಣ್ಣು ಹಾಯಿಸುವರೇ ಕಾದು ನೋಡಬೇಕಿದೆ.