ಕಾನೂನು ಕಾರ್ಯಾಗಾರ ಉದ್ಘಾಟನೆ
ಗದಗ, ಜು.22: ವಿಶ್ವದಲ್ಲಿಯೇ ಭಾರತದ ನ್ಯಾಯಾಂಗವು ಅತ್ಯುನ್ನತವಾದ ನ್ಯಾಯಾಂಗವಾಗಿದೆ. ಅಮಾಯಕರಿಗೆ ಶಿಕ್ಷೆಗೆ ಒಳಗಾಗಬಾರದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನೊಂದವರಿಗೆ, ಅಬಲೆಯರಿಗೆ, ದೀನದಲಿತರಿಗೆ, ಅಮಾಯಕರಿಗೆ ಪರಿಹಾರ ಒದಗಿಸುವುದೇ ಕಾನೂನಿನ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ತಿಳಿಸಿದರು.
ನಗರದ ಗದಗ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾದ ಮೂರು ದಿನಗಳ ಕಾನೂನು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಬೇಕಾದ ಮಹತ್ತರ ಉದ್ದೇಶವಾಗಿದ್ದು, ಒಂದು ರಾಷ್ಟ್ರದ ಅಭಿವೃದ್ಧಿ ಹೊಂದಬೇಕಾದರೆ ಆ ರಾಷ್ಟ್ರದಲ್ಲಿ ಶಾಂತಿ ಕಾನೂನು ಸುವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಕಾನೂನು ಸಾಕ್ಷರತೆಯು ಬರೀ ಸಾಕ್ಷರತೆಯಾಗದೇ ಸಾರ್ವಜನಿಕರು ಯಾವುದು ತಪ್ಪು ಯಾವುದು ಸರಿ ಎಂದು ತಿಳುವಳಿಕೆ ಹೊಂದುವಂತಾಗಬೇಕು ಎಂದರು.
ಕಾನೂನಿನ ಅರಿವು ಹಾಗೂ ಸೌಲಭ್ಯಗಳು ಮನೆಮನೆಗೆ ತಲುಪಬೇಕು ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ-2023, ಮೂರು ನೂತನ ಕಾನೂನುಗಳ ಪಕ್ಷಿ ನೋಟದ ವಿಷಯಗಳ ಕುರಿತು ಅವರು ವಿವರಿಸಿದರು.
ಸಚಿವ ಡಾ.ಎಚ್.ಕೆ. ಪಾಟೀಲ ಅವರು ಮಾತನಾಡಿ, ಜಿಲ್ಲೆಯಲ್ಲಿ 100 ಗ್ರಾಮಗಳನ್ನು ವ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿ ಮಾಡುವುದು ನಮ್ಮ ಸರ್ಕಾರದ ಮುಖ್ಯ ಉದೇಶವಾಗಿದ್ದು ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಶಾಂತಿ ಮನೋಭಾವ ಹೊಂದಿದ ಗದಗ ಜಿಲ್ಲೆಯಲ್ಲಿ 100 ಗ್ರಾಮಗಳನ್ನು ವ್ಯಾಜ್ಯ ಮುಕ್ತ ಮಾಡಲು ಪ್ರಯತ್ನಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನ್ಯಾಯಾಂಗದ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಭಾರತ ದೇಶದ ಸ್ವಾತಂತ್ರ್ಯ ತೊಂದುಕೊಡುವಲ್ಲಿ ಆಗಿನ ವಕೀಲರ ಪಾತ್ರವೂ ಬಹಳಷ್ಟಿದೆ. ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ ಸದ್ಬಳಕೆಯಾಗಬೇಕು. ಕಾನೂನು ವ್ಯವಸ್ಥೆಯಿಂದ ದೇಶದ ಪ್ರಗತಿಯಾಗಬೇಕು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯ ಸ್ಥಾಪನೆ, ಕಾನೂನುಗಳ ಅನುಷ್ಠಾನ ಇವುಗಳಿಗೆಲ್ಲ ಕಾನೂನು ಕಾರ್ಯಾಗಾರ ತನ್ನದೇ ಮಹತ್ವವನ್ನು ಪಡೆದಿದೆ ಎಂದು ಹೇಳಿದರು.
ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಮ್ ಐ ಹಿರೇಮನಿ ಪಾಟೀಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನೂನು ಕಾರ್ಯಾಗಾರದ ಸದುಪಯೋಗವನ್ನು ಯುವ ವಕೀಲರು ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ, ಹೆಚ್ಚುವರಿ ಜಿಲ್ಲಾ ಪೆÇಲೀಸ ವರಿಷ್ಟಾಧಿಕಾರಿ ಎಂ.ಬಿ.ಸಂಕದ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎಸ್.ಜಿ. ಪಲ್ಲೇದ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರುಗಳಾದ ವಿ.ಡಿ.ಕಾಮರೆಡ್ಡಿ, ಎಸ್.ಎಚ್.ಅಸಿಫ್ ಅಲಿ, ಎಸ್.ಎಸ್. ಮಿಟ್ಟಲಕೋಡ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎ.ಎಮ್.ಹದ್ಲಿ, ಖಜಾಂಚಿ ವಿ.ಎಚ್. ಮೇರವಾಡೆ, ನ್ಯಾಯವಾದಿಗಳು, ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು, ಕಾನೂನು ವಿದ್ಯಾರ್ಥಿಗಳು ಹಾಜರಿದ್ದರು.
ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ಎಚ್. ಮಾಡಲಗೇರಿ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಪ್ರಕಾಶ ಕಣಗಿನಹಾಳ ವಂದಿಸಿದರು. ವಕೀಲರಾದ ಎಂ,.ಬಿ. ಮತ್ತೂರ ಕಾರ್ಯಕ್ರಮ ನಿರ್ವಹಿಸಿದರು.