ವಚನಗಳನ್ನು ಮಕ್ಕಳಿಗೆ ಕಲಿಸುವ ಜೊತೆಗೆ ಅರ್ಥೈಸುವ ಕಾರ್ಯವಾಗಲಿ
ಗದಗ,ಜು.22: ಮಹಾಶರಣ ಹಡಪದ ಅಪ್ಪಣ್ಣ ಅವರ ವಚನಗಳನ್ನು ಸಮಾಜದ ಮಕ್ಕಳಿಗೆ ಕಲಿಸುವ ಜೊತೆಗೆ ಅರ್ಥೈಸುವ ಕಾರ್ಯವಾಗಬೇಕು ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.
ನಗರದ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರುಗಳ ಸಹಯೋಗದಲ್ಲಿ ಏರ್ಪಡಿಸಲಾದ ಹಡಪದ ಅಪ್ಪಣ್ಣನವರ ಜಯಂತಿಯನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಶಿವಶರಣರ ಜಯಂತಿಗಳಲ್ಲಿ ಮಕ್ಕಳಿಗೆ ಆ ಮಹಾಶರಣರ ವಚನಗಳನ್ನು ಅರ್ಥೈಸುವ ಕೆಲಸಗಳೊಂದಿಗೆ ಸರ್ಕಾರದ ಜಯಂತಿ ಅರ್ಥಪೂರ್ಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಹಡಪದ ಅಪ್ಪಣ್ಣ ಸಮುದಾಯವು ಚಿಕ್ಕದಾದರೂ ಸಹ ಜಯಂತಿ ಕಾರ್ಯಕ್ರಮಕ್ಕೆ ಅಪಾರ ಪ್ರಮಾಣದಲ್ಲಿ ಆಗಮಿಸಿದ್ದು ಸಂತಸ ತಂದಿದೆ ಎಂದರು.
ನಗರದಲ್ಲಿ ಹಡಪದ ಅಪ್ಪಣ್ಣ ಸಮುದಾಯ ಭವನಕ್ಕೆ ಈಗಾಗಲೇ ನಿವೇಶನ ದೊರೆತು ಸಮುದಾಯ ಭವನ ಕಟ್ಟಡ ಆರಂಭವಾಗಿದೆ ಇದಕ್ಕೆ ಅಗತ್ಯವಿರುವ ಅನುದಾನವನ್ನು ನೀಡಲಾಗುವುದು. ಮುಂದಿನ ವರ್ಷದ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಸಮುದಾಯ ಭವನದಲ್ಲಿ ಕಾಮಗಾರಿ ಪೂರ್ಣಗೋಳಿಸಿ ಅಲ್ಲಿಯೇ ಆಚರಿಸುವ ವಿಶ್ವಾಸವಿದೆ ಎಂದು ಹೇಳಿದರು.
ಪೂಜ್ಯ ಶ್ರೀ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿನ ಜಾತಿ, ಮತ ಪಂಥ ತೊಡೆದು ಹಾಕಲು ಹೋರಾಟ ನಡೆಸಿದ ವಿಶ್ವಗುರು ಬಸವಣ್ಣನವರ ಆಪ್ತರಾಗಿದ್ದರು ಹಡಪದ ಅಪ್ಪಣ್ಣ. ಬಸವಣ್ಣನವರ ಮಹಾಮನೆಯ ಮುಖ್ಯಸ್ಥರಾಗಿ ಸಹ ಅವರು ಕಾರ್ಯ ಮಾಡಿದ್ದಾರೆ ಎಂದರು.
ಶಿವಶರಣರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಶಿವಶರಣರ ವಚನಗಳನ್ನು ಮಕ್ಕಳು ಕಲಿತರೆ ನಮ್ಮ ಸಂಸ್ಕೃತಿಯ ಅರಿವು ಅರಿತು ಅವುಗಳನ್ನು ಮುಂದುವರೆಸುತ್ತಾರೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿಯ ಬಗ್ಗೆಯೂ ಅರಿವು ಮೂಡಿಸಬೇಕಿದೆ. ಶಿಕ್ಷಣದಿಂದ ಮಾತ್ರವೇ ಪರಿಪೂರ್ಣ ವಿಕಾಸ ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಹಡಪದ ಅಪ್ಪಣ್ಣ ಸಂಘದ ಜಿಲ್ಲಾ ಅಧ್ಯಕ್ಷ ಮೋಹನ ಚಂದಪ್ಪನವರ ಪ್ರಾಸ್ತಾವಿಕ ಮಾತನಾಡಿ, ಶಿವಶರಣ ಹಡಪದ ಅಪ್ಪಣ್ಣನವರ 890 ನೇ ಜಯಂತಿ ಇದಾಗಿದೆ. ಈ ಜಯಂತಿಯನ್ನು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಶಿವಾನುಭವ ಮಂಟಪದಲ್ಲಿ ಆಚರಿಸಲು ಅವಕಾಶ ಮಾಡಿಕೊಟ್ಟ ಸರ್ವರಿಗೂ ವಂದನೆಗಳು ಎಂದರು.
ಹುಲಕೋಟಿ ಮುಖ್ಯ ಶಿಕ್ಷಕರಾದ ಎ.ವಿ.ಪ್ರಭು ಅವರು ಹಡಪದ ಅಪ್ಪಣ್ಣನವರ ಜೀವನ ಮತ್ತು ಸಂದೇಶ ಕುರಿತು ಉಪನ್ಯಾಸ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಅಕಬರಸಾಬ ಬಬರ್ಜಿ, ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಎಸ್. ಎನ್. ಬಳ್ಳಾರಿ, ಕಲ್ಲಪ್ಪ ಹಡಪದ, ಬಸವರಾಜ ಕಡೆಮನಿ, ಅಶೋಕ ಮಂದಾಲಿ, ಪ್ರಭು ಬುರಬುರೆ, ಸೋಮಣ್ಣ ಹಡಪದ, ಸೋಮು ಲಮಾಣಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ ಸೇರಿದಂತೆ ಇತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಸಮುದಾಯದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ ಕಾಯಕ ರತ್ನ ಪ್ರಶಸ್ತಿಯನ್ನು ಸಮಾಜದಿಂದ ನೀಡಿ ಗೌರವಿಸಲಾಯಿತು.