ಒಂದೇ ದಿನ ಎರಡು ಮನೆಗಳ್ಳತನ ಪ್ರಕರಣ;  8.9 ಲಕ್ಷ ಮೌಲ್ಯದ ನಗ, ನಾಣ್ಯ ಕಳವು
ಸಂಜೆವಾಣಿ ವಾರ್ತೆ
ಹರಿಹರ.ಜು.೨೨: ಮನೆಗಳಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ, ಇಂಟರ್‌ಲಾಕ್ ಮುರಿದು ಒಟ್ಟು 8.9 ಲಕ್ಷ ರೂ. ಮೌಲ್ಯದ ನಗ, ನಾಣ್ಯ ಕಳವು ಮಾಡಿರುವ ಎರಡು ಪ್ರತ್ಯೇಕ ಮನೆಗಳ್ಳತನ ಪ್ರಕರಣಗಳು ಇಲ್ಲಿನ ಗಾಂಧಿನಗರದಲ್ಲಿ ಶುಕ್ರವಾರ ನಡೆದಿವೆ. ನಗರದ ಅಕ್ಷಯ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ಮಾಡುವ ಸಾವಿತ್ರಿಬಾಯಿ ಶುಕ್ರವಾರ ಬೆಳಿಗ್ಗೆ ತಮ್ಮ ಗಾಂಧಿನಗರದ 1ನೇ ಮೇನ್, 3ನೇ ಕ್ರಾಸ್‌ನಲ್ಲಿರುವ ಮನೆಗೆ ಬೀಗ ಹಾಕಿಕೊಂಡು ನಗರದ ಹಳೆ ಹರ್ಲಾಪುರದ ತಾಯಿ ಮನೆಗೆ ಹೋಗಿದ್ದರು. ಪಕ್ಕದ ಮನೆಯವರು ಶನಿವಾರ ಬೆಳಿಗ್ಗೆ ಫೋನ್ ಮಾಡಿ, ನಿಮ್ಮ ಮನೆಯ ಚಿಲಕ ಮುರಿದು ಕೆಳಗೆ ಬಿದ್ದಿದೆ ಎಂದು ತಿಳಿಸಿದ್ದರಿಂದ ಬಂದು ನೋಡಿದಾಗ ಕಳ್ಳರು ಹೊರಗಿನ ಬೀಗ ಒಡೆದಿದ್ದಲ್ಲದೆ, ಇಂಟರ್‌ಲಾಕ್ ಸಹ ಮುರಿದು, ಮನೆಯ ಬೆಡ್‌ರೂಮ್‌ನಲ್ಲಿ ಗಾಡ್ರೇಜ್ ಬೀರುವಿನ ಬಾಗಿಲು ತೆಗೆದು ಅದರಲ್ಲಿದ್ದ 7,35,000 ರೂ. ಮೌಲ್ಯದ ಒಟ್ಟು 147 ಗ್ರಾಂ ತೂಕದ ಬಂಗಾರದ ಮತ್ತು 5,500 ರೂ. ಮೌಲ್ಯದ 110 ಗ್ರಾಂ ಬೆಳ್ಳಿಯ ಆಭರಣ ಅಲ್ಲದೆ 12 ಸಾವಿರ ನಗದು ಹಣ ಸೇರಿ ಒಟ್ಟು 7,52,500 ರೂ. ಮೌಲ್ಯದ ನಗ, ನಾಣ್ಯ ಕಳ್ಳತನ ಮಾಡಿಕೊಂಡು ಹೋಗಿದ್ದು ತಿಳಿದಿದೆ. ಕಳೆದ 6 ತಿಂಗಳಿAದ ಹರಿಹರದಲ್ಲಿ ವಾಸವಿರುವ ಶಿವಮೊಗ್ಗ ಜಿಲ್ಲೆ ಆನಂದಪುರದ ಶೇಖ್ ಪಹಾನ್ ಮಸೂದ್ ಅವರ ಪತ್ನಿ ಜೈಭೀಮನಗರದ ತವರು ಮನೆಗೆ ಹೋಗಿದ್ದರಿಂದ ತಾವೂ ಸಹ ಶುಕ್ರವಾರ ರಾತ್ರಿ 9 ಗಂಟೆಗೆ ಗಾಂಧಿನಗರದ 1ನೇ ಮೇನ್, 4ನೇ ಕ್ರಾಸ್‌ನಲ್ಲಿರುವ ತಮ್ಮ ಮನೆಗೆ ಬೀಗ ಹಾಕಿಕೊಂಡು ಅಲ್ಲಿಗೆ ಹೋಗಿದ್ದರು. ಪತ್ನಿಯೊಂದಿಗೆ ಬೆಳಿಗ್ಗೆ 9-30ಕ್ಕೆ ಮನೆಗೆ ವಾಪಾಸ್ ಬಂದಾಗ ಮನೆಯ ಅರ್ಧ ಬಾಗಿಲು ತೆರೆದಿತ್ತು. ಚಿಲಕ, ಇಂಟರ್‌ಲಾಕ್ ಮುರಿದು, ಮನೆಯೊಳಗೆ ಗಾಡ್ರೇಜ್ ಬೀರುವಿನಲ್ಲಿದ್ದ 1.17 ಲಕ್ಷ ರೂ. ಮೌಲ್ಯದ 24 ಗ್ರಾಂ ತೂಕದ ಬಂಗಾರದ ಮತ್ತು 5,100 ರೂ. ಮೌಲ್ಯದ 100 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಅಲ್ಲದೆ 15,000 ರೂ. ನಗದು ಹಣ ಸೇರಿ ಒಟ್ಟು 1.37 ಲಕ್ಷ ಮೌಲ್ಯದ ನಗ, ನಾಣ್ಯ ಕಳ್ಳತನ ಮಾಡಿರುವುದು ಗೊತ್ತಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ಎರಡೂ ಪ್ರಕರಣ ದಾಖಲಾಗಿವೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನ ದಳ ಮತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ನಗರದಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದರಿಂದ ನಾಗರೀಕರು ಆತಂಕಕ್ಕೀಡಾದ್ದಾರೆ. ಪೊಲೀಸರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ ವಹಿಸಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಪೊಲೀಸರು ಕಳ್ಳತನ ಪ್ರಕರಣಗಳನ್ನು ನಿಯಂತ್ರಿಸಬೇಕು, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.