ಮಾಜಿ ಸಚಿವ ನಾಗೇಂದ್ರಗೆ ಕ್ಲೀನ್ ಚಿಟ್ ನೀಡುವ ಕೆಲಸ ಸಿದ್ದರಾಮಯ್ಯ ಮಾಡಲಿ
ಸಂಜೆವಾಣಿ ವಾರ್ತೆ
ದಾವಣಗೆರೆ, ಜು.22; ಎಲ್ಲಾ ಸರ್ಕಾರಗಳ ಅವಧಿಯ ಭ್ರಷ್ಟಾಚಾರ, ಹಗರಣಗಳ ತನಿಖೆ ಮಾಡಿಸುವುದಾಗಿ ಬ್ಲಾಕ್ ಮೇಲ್ ಮಾಡುವ ಬದಲು, ನಿಮ್ಮ ಕೈಯಲ್ಲೇ ಅಧಿಕಾರ ಇದೆ. ಎಲ್ಲಾ ಸರ್ಕಾರಗಳ ಅವದಿಯಲ್ಲಿಆಗಿರುವ ಹಗರಣಗಳ ತನಿಖೆ ಮಾಡಿಸಿ. ಬೇಡ ಅಂದವರು ಯಾರು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ನಗರದ ಲೋಕೋಪಯೋಗಿ ಇಲಾಖೆಯ ಸರ್ಕೀಟ್ ಹೌಸ್‌ನಲ್ಲಿ ಭದ್ರಾ ಅಚ್ಚುಕಟ್ಟು ರೈತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಷ್ಟೇ ಅಲ್ಲ, ಹಿಂದೆ ಯಾವೆಲ್ಲಾ ಪಕ್ಷಗಳ ಸರ್ಕಾರವಿದ್ದವೋ ಅವೆಲ್ಲದರ ತನಿಖೆ ಮಾಡಿಸಿ. ತನಿಖೆ ಮಾಡಿಸಲು ಯಾರು ಬೇಡವೆಂದಿದ್ದಾರೆ ಎಂದರು.ವಾಲ್ಮೀಕಿ ಹಗರಣದ ತನಿಖೆಯನ್ನು ಎಸ್‌ಐಟಿ ಮೂಲಕ ಮಾಡಿಸಿ, ಮಾಜಿ ಸಚಿವ ನಾಗೇಂದ್ರಗೆ ಕ್ಲೀನ್ ಚಿಟ್ ನೀಡುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ. ಎಸ್ಐಟಿ ಅಂದ್ರೆ ಸಿದ್ದರಾಮಯ್ಯಇನ್‌ವೆಸ್ಟಿಗೇಷನ್ ಟೀಂ ಆಗಿದೆ. ಅಧಿಕಾರವೂ ನಿಮ್ಮ ಕೈಯಲ್ಲೇ ಇದ್ದು, ಎಲ್ಲಾ ಸರ್ಕಾರಗಳ ಅವದಿಯ ಭ್ರಷ್ಟಾಚಾರ, ಹಗರಣದ ತನಿಖೆ ಮಾಡಿಸಿ ಎಂದು ಅವರು ತಿಳಿಸಿದರು.ಅತಿವೃಷ್ಟಿಯಿಂದಾಗಿ ಸಂಪೂರ್ಣ ಮನೆಗಳು ಬಿದ್ದವರಿಗೆ ಮನೆಗೆ ನೆರವು, ಮನೆ ಬಾಡಿಗೆ ಕಟ್ಟಲು ಹಣ ನೀಡುತ್ತಿದ್ದೆವು. ಆದರೆ, ಸುಳ್ಳು ಪ್ರಚಾರ, ಭರವಸೆ, ಬೋಗಸ್ ಆಶ್ವಾಸನೆ ನೀಡುವ ಕೆಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ಬಳಸಿಕೊಳ್ಳುತ್ತಿದೆ. ವಾಲ್ಮೀಕಿ ನಿಗಮ, ಮುಡಾದ ಬ್ರಹ್ಮಾಂಡ ಭ್ರಷ್ಟಾಚಾರ ಎಲ್ಲವೂ ಜನರ ಕಣ್ಣುಗಳ ಮುಂದಿವೆ. ಇಂತಹ ಸಿದ್ದರಾಮಯ್ಯಗೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಅವರು ಆಗ್ರಹಿಸಿದರು.ಸಿದ್ದರಾಮಯ್ಯನವರೇ 2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದಿರಿ. ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್‌ ಮೇಲೆ ಆರೋಪ ಮಾಡಿದ್ದಿರಿ. ಅರ್ಕಾವತಿ ಬಡಾವಣೆಯ ಹಗರಣದ ಕಡತವನ್ನು ಜಗದೀಶ ಶೆಟ್ಟರ್‌ ಕಡತವನ್ನು ತಿರಸ್ಕರಿಸಿದ್ದರು. 2013ರಲ್ಲಿ ಸಿದ್ದರಾಮಯ್ಯ ಸಿಎಂ ಆದಾಗ ಸಾವಿರಾರು ಕೋಟಿ ರು.ಗಳ ಭ್ರಷ್ಟಾಚಾರದ ಅರ್ಕಾವತಿಕಡತಕ್ಕೆ ರೀಡೂ ಅಂತಾ ಮಾಡಿದ್ದೀರಿ. ಮಾಡಿಫೈ ಮಾಡಿ, ರೀಡೂ ಮಾಡಿದ್ದೂ ನೀವಲ್ಲವೇ? ಒಂದು ವೇಳೆ ಯಾವುದೇ ಸರ್ಕಾರದಲ್ಲಿ ಹಗರಣವಾಗಿದ್ದರೆ ತನಿಖೆ ಮಾಡಿಸಿ ಎಂದು ಅವರು ಹೇಳಿದರು.ವಾಲ್ಮೀಕಿ ನಿಗಮಕ್ಕೆ ಅನ್ಯಾಯ ಮಾಡುತ್ತಿದ್ದೀರಿ. ಪರಿಶಿಷ್ಟ ಜಾತಿ-ಪಂಗಡಗಳ ಜನರಿಗೆ ಮೀಸಲಾಗಿದ್ದಹಣವನ್ನು ದುರುಪಯೋಗಪಡಿಸಿಕೊಂಡಿದ್ದೀರಿ. ನಮ್ಮಕಾಲದಲ್ಲಿ ಒಂದು ವೇಳೆ ಭ್ರಷ್ಚಾಚಾರವಾಗಿದ್ದರೆ ಅದನ್ನೂ ತನಿಖೆ ಮಾಡಿಸಿ. ಸಿದ್ದರಾಮಯ್ಯನವರೇ ಹಿಂದಿನ ಎಲ್ಲಾ ಸರ್ಕಾರಗಳ ಹಗರಣಗಳ ತನಿಖೆ ಮಾಡಿಸುತ್ತೇವೆಂದು ಬ್ಲಾಕ್ ಮೇಲ್ ಮಾಡಬೇಡಿ, ತನಿಖೆ ಮಾಡಿಸಿ. ತನಿಖೆ ಮಾಡಿಸಲು ನಿಮಗೆ ಬೇಡ ಅಂದವರಾದರೂ ಯಾರು ಎಂದು ಅವರು ಪ್ರಶ್ನಿಸಿದರು.ಜನ ಸಾಮಾನ್ಯರು, ರೈತರ ಬಗ್ಗೆ ಕಾಳಜಿಯೇ ಇಲ್ಲ ಜನ ವಿರೋಧಿ, ರೈತ ವಿರೋಧಿ ಸರ್ಕಾರ ಈಗ ರಾಜ್ಯದಲ್ಲಿದೆ. ಕಳೆದ 15 ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ರೈತರ ಮೊಗದಲ್ಲಿಮಂದಹಾಸ ಮೂಡಿದ್ದರೂ, ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬಿತ್ತಿದ್ದ ಮೆಕ್ಕೆಜೋಳ ಸೇರಿದಂತೆ ಬಹುತೇಕ ಬೆಳೆಗಳಿಗೆ ಹಾನಿಯಾಗುತ್ತಿದೆ. ಬೆಳೆ ಹಾನಿ ಪರಿಹಾರ ನೀಡುವ ಕಡೆ ಸಿದ್ದರಾಮಯ್ಯ ಸರ್ಕಾರ ಗಮನಹರಿಸಲಿ. ಇಂದಿಗೂ ಬರ ಪರಿಹಾರವನ್ನೇ ಈ ಸರ್ಕಾರ ನೀಡಿಲ್ಲ ಎಂದು ಅವರು ದೂರಿದರು.ಹಿಂದಿನಿಂದಲೂ ಕೇಂದ್ರದತ್ತ ಬೊಟ್ಟು ಮಾಡುವ ಕೆಲಸ ಸಿದ್ದರಾಮಯ್ಯ ಮಾಡುತ್ತಲೇ ಬಂದಿದ್ದಾರೆ. ಈಗಲೂ ಅದನ್ನೇ ಮಾಡದೇ, ರೈತರಿಗೆ ಬರ ಪರಿಹಾರ ನೀಡಲಿ. ಈಗ ಬೆಳೆ ಹಾನಿ ಪರಿಹಾರ ಕೊಡುವ ಮನಸ್ಸು ಮಾಡಲಿ. ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ಮನೆ ಹಾನಿಯಾದರೆ ದುರಸ್ಥಿಗೆ 50 ಸಾವಿರ, ಮನೆಗೆ ನೀರು ನುಗ್ಗಿದರೆ 10 ಸಾವಿರ, ಆಹಾರ ಧಾನ್ಯ ಇತರೆ ಖರೀದಿಗೆ 10 ಸಾವಿರ, ಮನೆ ಹಾನಿ ಪರಿಹಾರಕ್ಕೆ ಎ, ಬಿ. ಸಿ ಅಂತಾ ಮಾಡಿ, 5 ಲಕ್ಷ, 3 ಲಕ್ಷ ಹಾಗೂ 50 ಸಾವಿರ ರು. ನೀಡುತ್ತಿದ್ದೆವು. ಆದಗೆ, ಕಾಂಗ್ರೆಸ್ ಸರ್ಕಾರ 5 ಸಾವಿರ, 6 ಸಾವಿರ ರು.ಗಳನ್ನು ಮಾತ್ರ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.ನಮ್ಮ ಮೇಲೆ ಆರೋಪಿಸುತ್ತಿದ್ದ ಸಿದ್ದರಾಮಯ್ಯ ತಮ್ಮ ಸರ್ಕಾರದಲ್ಲಿ ಒಂದೇ ಒಂದು ಗ್ರಾಪಂಗೆ ಒಂದು ಮನೆಯನ್ನೂ ಕೊಟ್ಟಿಲ್ಲ. ನಮ್ಮ ಸರ್ಕಾರವಿದ್ದಾಗ ನಮ್ಮ ನಮ್ಮ ಕ್ಷೇತ್ರಕ್ಕೆ 4500 ಮನೆ ತಂದಿದ್ದೆವು. ಆದರೆ, ಸಿದ್ದರಾಮಯ್ಯನವರದ್ದು ದುರಂತದ ಸರ್ಕಾರವಾಗಿದೆ. ಇದೊಂದು ಪಾಪದ ಸರ್ಕಾರವಿದ್ದು, ದಪ್ಪನೆಯ ಚರ್ಮದ ಸರ್ಕಾರವಾಗಿದೆ. ರೈತರ ಬಗ್ಗೆಯೂ ಕಾಳಜಿ ಇಲ್ಲ, ಜನ ಸಾಮಾನ್ಯರಿಗೂ ಸ್ಪಂದಿಸದ ಸರ್ಕಾರವಾಗಿದೆ ಎಂದು ರೇಣುಕಾಚಾರ್ಯ ವಾಗ್ಧಾಳಿ ನಡೆಸಿದರು.