ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಿ-ವೆಂಕಟೇಶಬಾಬು
ಕೋಲಾರ,ಜು,೨೨- ವೃತ್ತಿಶಿಕ್ಷಣವೂ ಸಮಗ್ರ ಶಿಕ್ಷಣದ ಭಾಗವಾಗಿದ್ದು, ಇದರ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಿ, ಪರಿಸರ ಕಾಳಜಿ ಬೆಳೆಸಿ ಮತ್ತು ಶಾಲೆಯಲ್ಲಿ ರೂಪಣಾತ್ಮಕ ಹಾಗೂ ಸಂಕಲನಾತ್ಮಕ ಪರೀಕ್ಷೆ,ಚಟುವಟಿಕೆ ಮಾಡಿಸಿ ದಾಖಲೆಗಳನ್ನು ನಿರ್ವಹಿಸಿ ಎಂದು ಡಿಡಿಪಿಐ ಕಚೇರಿಯ ವೃತ್ತಿಶಿಕ್ಷಣ ವಿಷಯ ಪರಿವೀಕ್ಷಕ ವೆಂಕಟೇಶಬಾಬು ಸೂಚಿಸಿದರು.
ನಗರದ ಬಾಲಕಿಯರ ಜೂನಿಯರ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರೌಢಶಾಲಾ ವೃತ್ತಿಶಿಕ್ಷಣ ಶಿಕ್ಷಕರ ಮಾಸಿಕ ಸಭೆ ಹಾಗೂ ವಿಷಯಾಧಾರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾqಡಿದರು.
ಶಾಲೆಗಳಲ್ಲಿ ರೂಪಣಾತ್ಮಕ ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸಿ, ದಾಖಲೆ ನಿರ್ವಹಿಸಿ ಎಂದ ಅವರು, ಗಿಡಮರಗಳನ್ನು ಬೆಳೆಸುವುದರ ಜತೆಗೆ ಇತ್ತೀಚೆಗೆ ಜಿಪಂ ಸಿಇಒ ಪದ್ಮ ಬಸವಂತಪ್ಪ ಅವರ ಸೂಚನೆಯಂತೆ ಬೀಜದುಂಡೆ ತಯಾರಿಸಿದ್ದು, ಅದರ ಬಿತ್ತನೆಗೆ ದಿನಾಂಕ ತಿಳಿಸುವುದಾಗಿ ತಿಳಿಸಿದರು.
ವೃತ್ತಿಶಿಕ್ಷಣ ಮಹಾತ್ಮಾಗಾಂಧೀಜಿಯರವ ಕನಸಿನ ಮೂಲ ಶಿಕ್ಷಣವಾಗಿದೆ, ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸುವುದು, ಸ್ವಚ್ಚತೆ, ಸಂಸ್ಕಾರ ಕಲಿಸುವ ಕಾರ್ಯವನ್ನೂ ವೃತ್ತಿಶಿಕ್ಷಕರು ನಿರ್ವಹಿಸುತ್ತಿದ್ದಾರೆ, ಶಾಲೆ ಆವರಣದ ಹಸಿರಾಗಿರಲು ಅವರೇ ಕಾರಣರಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರೌಢಶಾಲಾ ವೃತ್ತಿಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯ ಮಾತನಾಡಿ,ಪರಿಸರ ನಾಶದಿಂದಾಗುವ ಸಮಸ್ಯೆಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿ ಅವರಲ್ಲಿ ಗಿಡಮರ ಬೆಳೆಸುವ ಆಲೋಚನೆಯನ್ನು ಸದೃಢಗೊಳಿಸುವ ಕಾರ್ಯದಲ್ಲಿ ವೃತ್ತಿಶಿಕ್ಷಕರ ಪಾತ್ರವಿದೆ, ಬಿಸಿಯೂಟಕ್ಕೂ ನೆರವು ನೀಡುವ ವೃತ್ತಿಶಿಕ್ಷಕರಿಗೂ ಬೋಧನೆಗೆ ಅನುಕೂಲವಾಗುವಂತೆ ಪಠ್ಯಪುಸ್ತಕ ಒದಗಿಸುವ ಅಗತ್ಯವಿದೆ ಎಂದರು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಮಾರ್ಕಂಡೇಶ್ವರ್ ಮಾತನಾಡಿ, ರೂಪಣಾತ್ಮಕ ಮತ್ತು ಸಂಕಲನಾತ್ಮಕ ಚಟುವಟಿಕೆ ದಾಖಲೆಗಳ ನಿರ್ವಹಣೆ ಅತಿ ಮುಖ್ಯವಾಗಿದೆ, ಶಾಲೆಯ ಪರಿಸರ ಸಂರಕ್ಷಣೆಯಲ್ಲಿ ಅತಿ ಪ್ರಮುಖ ಪಾತ್ರ ವಹಿಸುವ ನೀವು, ದಾಖಲೆಗಳ ನಿರ್ವಹಣೆಯಲ್ಲೂ ಮುಂಚೂಣಿಯಲ್ಲಿರಬೇಕು, ಅಧಿಕಾರಿಗಳು ಬಂದಾಗ ದಾಖಲೆಗಳಿಲ್ಲ ಎಂದು ಮುಜುಗರಕ್ಕೆ ಒಳಗಾಗಬಾರದು ಎಂದು ಕಿವಿಮಾತು ಹೇಳಿ, ಮಾಹಿತಿ ಒದಗಿಸಿದರು.
ಜಿಲ್ಲಾ ಸಂಘದ ಖಜಾಂಚಿ ಟಿ.ಎ.ಪ್ರಕಾಶ್ ಬಾಬು ಮಾತನಾಡಿ, ಪ್ರೌಢಶಾಲಾ ವೃತ್ತಿಶಿಕ್ಷಕರ ಸಂಘವನ್ನು ಬಲಗೊಳಿಸುವ ಅಗತ್ಯವಿದೆ, ಆರ್ಥಿಕವಾಗಿಯೂ ಸಂಘ ಸದೃಢವಾಗಲು ಎಲ್ಲರ ಸಹಕಾರ ಬೇಕು, ಕಳೆದ ವರ್ಷ ವಸ್ತುಪ್ರದರ್ಶನ ನಡೆಸಿ ರಾಜ್ಯದಲ್ಲೇ ಉತ್ತಮ ಹೆಸರು ಜಿಲ್ಲಗೆ ಬಂದಿದೆ, ಅದೇ ಹೆಸರು ಉಳಿಯಲು ಎಲ್ಲಾ ಶಿಕ್ಷಕರು ಬದ್ದತೆಯಿಂದ ಕೆಲಸ ಮಾಡೋಣ ಎಂದರು.
ರಾಜ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ರಾಮಚಂದ್ರಪ್ಪ ಸ್ವಾಗತಿಸಿದ ಸಭೆಯಲ್ಲಿ ವೃತ್ತಿಶಿಕ್ಷಕರ ಸಂಘದ ಉಪಾಧ್ಯಕ್ಷೆ ಧನಲಕ್ಷ್ಮಿ, ಮುಳಬಾಗಿಲಿನ ಬಿ.ಎಂ.ಗೋಪಾಲ್, ಶ್ರೀನಿವಾಸಪುರದ ಮುರಳಿ, ಶ್ರೀರಾಮರೆಡ್ಡಿ,ಮಂಜುಳಾ,ಗೀತಾಮಣಿ, ಶೈಲಜ, ಚೌಡಮ್ಮ,ಜಯಲಕ್ಷ್ಮಿ, ರಂಗಪ್ಪ,ಪುಷ್ಪಲತಾ, ನಾಗರತ್ನಮ್ಮ, ಶಾಂತಮ್ಮ, ಮತ್ತಿತರರು ಹಾಜರಿದ್ದರು.