ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಒತ್ತಾಯ; ಪೋಸ್ಟರ್ ಬಿಡುಗಡೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೧; ರಾಜ್ಯದ ಉಚ್ಛ ನ್ಯಾಯಾಲಯದ ಆದೇಶದಂತೆ ಶೈಕ್ಷಣಿಕ ಧನ ಸಹಾಯ ಪಾವತಿ ಮಾಡಿ, ಬೋಗಸ್ ಖರೀದಿ ಪ್ರಕ್ರಿಯೆ ನಿಲ್ಲಿಸಿ ಕಾರ್ಮಿಕರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಜಾರಿ ಮಾಡುವಂತೆ ಆಗ್ರಹಿಸಿ ನಗರದಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿತು.ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ,‌ ಆಗಸ್ಟ್ 5ರಂದು ನಡೆಯಲಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಂದ ಮುಖ್ಯ ಮಂತ್ರಿ ಮನೆ ಚಲೋ ಕಾರ್ಯಕ್ರಮದ ಪೂರ್ವಭಾವಿಯಾಗಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಆವರಗೆರೆ ಹೆಚ್.ಜಿ.ಉಮೇಶ್, ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಆದೇಶ ವಾಪಸ್ ಪಡೆಯಬೇಕು. ಹೈಕೋರ್ಟ ನೀಡುದ ಆದೇಶದಂತೆ 2021ರ ಅಧಿಸೂಚನೆ ಅನ್ವಯಿಸಿ ಶೈಕ್ಷಣಿಕ ಧನ ಸಹಾಯ ಬಿಡುಗಡೆ ಮಾಡಬೇಕು. 2022-23-24 ಸಾಲಿನ ಬಾಕಿ ಅರ್ಜಿಗಳಿಗೂ ಧನ ಸಹಾಯ ಪಾವತಿಸಬೇಕು. ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನೋಂದಣಿ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸುವುದು ನಿಲ್ಲಬೇಕು ಹಾಗೂ ವಿಳಂಬ ಮಾಡದೇ ಕಾರ್ಡು ವಿತರಣೆ ಆಗಬೇಕು ಎಂದು ಆಗ್ರಹಿಸಿದರು.ಕಾರ್ಮಿಕರ ಹಲವು ಸೌಲಭ್ಯಗಳಿಗಾಗಿ ಸಲ್ಲಿಸಿರುವ ಸಾವಿರಾರು ಅರ್ಜಿಗಳು ವಿಲೇವಾರಿ ಆಗದೇ ಕೊಳೆಯುತ್ತಿವೆ. ಇವುಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ಪಿಂಚಣಿದಾರರಿಗೆ ಶೀಘ್ರವೇ ಅವರ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು. ಪಿಂಚಣಿಗೆ ಅರ್ಜಿ ಸಲ್ಲಿಸುವಲ್ಲಿ ಆಗುತ್ತಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.ಮತ್ತೊಬ್ಬ ಮುಖಂಡ ಕೆ.ಹೆಚ್. ಆನಂದ ರಾಜ್ ಮಾತನಾಡಿ,‌ಹೈಕೋರ್ಟ್ ನಿರ್ದೇಶನದಂತೆ ಟೆಂಡ‌ರ್ ಆಧಾರಿತ ಎಲ್ಲ ಖರೀದಿ ವ್ಯವಹಾರಗಳನ್ನು ನಿಲ್ಲಿಸಬೇಕು. ಇದುವರೆಗೆ ನಡೆದಿರುವ ಖರೀದಿಗಳಲ್ಲಿನ ಅವ್ಯವಹಾರಗಳು ನ್ಯಾಯಾಂಗ ತನಿಖೆ ನಡೆಯಬೇಕು. ಹೊಸ ತಂತ್ರಾಂಶದಲ್ಲಿನ ತಾಂತ್ರಿಕ ತೊಂದರೆಗಳು ಹಾಗೂ ಸರ್ವರ್ ಸಮಸ್ಯೆ ಪರಿಹರಿಸಬೇಕು‌ ಎಂದು ಸರ್ಕಾರದ ಗಮನ ಸೆಳೆದರು.ಬಾಕಿ ಇರುವ ಸೆಸ್ ಸಂಗ್ರಹ ಮಾಡಿ. ಬೃಹತ್ ಖಾಸಗಿ ಹಾಗೂ ಸಾರ್ವಜನಿಕ ನಿರ್ಮಾಣಗಳಿಗೆ ಶೇ 2 ರಷ್ಟು ಸೆಸ್ ವಿಧಿಸಬೇಕು. ಕಲ್ಯಾಣ ಮಂಡಳಿ ಪುನರಚಿಸಿ ಕೇಂದ್ರ ಕಾರ್ಮಿಕ ಸಂಘಗಳ ಪ್ರತಿನಿಧಿಗಳ ನೇಮಿಸಿ, ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕೆಂದು ಮನವಿ ಮಾಡಿದರು.ಈ ವೇಳೆ ವಿ.ಲಕ್ಷ್ಮಣ್, ಶಿವಕುಮಾರ್ ಡಿ.ಶೆಟ್ಟರ್, ಎಸ್.ಎಂ.ಸಿದ್ದಲಿಂಗಪ್ಪ, ಹೆಚ್.ಕೆ.ಆರ್.ಸುರೇಶ್, ಐರಣಿ ಚಂದ್ರು, ಕೆ.ಎಸ್. ಆದಿಲ್ ಖಾನ್, ಎಸ್. ಪರಮೇಶ್, ಕುಕ್ಕುವಾಡ ಮಂಜುನಾಥ್, ಪವಿತ್ರಾ ಇತರರು ಇದ್ದರು.