ಯೋಜನೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಲಿ
ಕೋಲಾರ,ಜು,೨೨- ರಾಜ್ಯಜನತೆಗೆ ಅನುಕೂಲವಾಗುವ ಕ್ರಮಗಳು, ಯೋಜನೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಲಿ ಎಂದು ಪ್ರಜ್ಞಾವಂತರ ವೇದಿಕೆಯ ವಕೀಲ ಕೆ.ನರೇಂದ್ರಬಾಬು ಆಗ್ರಹಿಸಿದ್ದಾರೆ.
ವಿಧಾನಸಭಾ ಅಧಿವೇಷನವು ಮುಂದಿನ ಕಾರ್ಯಾವಧಿಯ ಆಡಳಿತ ರೂಪುರೇಷೆಯಾಗಿ ಚರ್ಚೆಯಾಗಲೀ ಹೊರೆತು ಕಾಲಹರಟೆಯಾಗದಿರಲಿ. ಈ ಬಾರಿ ರಾಜ್ಯದಲ್ಲಿ ಅತಿವೃಷ್ಠಿಯಾಗಿದೆ, ಜನಮನೆ ಸಂಕಷ್ಟಕ್ಕೆ ಸಿಲುಕಿದೆ. ಬೆಳೆ ಹಾನಿಯಾಗಿದೆ. ಪ್ರವಾಹ ಸಾವು-ನೋವುಗಳಿಗೆ ಕಾರಣವಾಗಿದೆ. ರಾಜ್ಯಪರಿಸ್ಥಿತಿ ಹೀಗಿರುವಾಗ ಪರಿಹಾರೋಪಾಯಗಳ ಬಗ್ಗೆ ಚರ್ಚೆಯಾಗದೇ ಅಧಿವೇಷನದ ಸಮಯ ಪೋಲು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಅಧಿವೇಶನದಲ್ಲಿನ ವಾದವಿವಾದ ಗಳನ್ನು ನೋಡುವಾಗ ಜನಪ್ರತಿನಿಧಿ ಗಳನ್ನು ತಪ್ಪಾಗಿ ಆರಿಸಿದ್ದೇವೆಯೇ ಎಂದು ಅನುಮಾನ ಮೂಡುತ್ತಿದೆ. ಜನಪ್ರತಿನಿಧಿಗಳು ತಮಗೆ ನಾವೆಲ್ಲಾ ಸೇರಿ ಕಲ್ಪಿಸಿರುವ ಒಂದು ಸದವಕಾಶವನ್ನು ಪೋಲು ಮಾಡುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಅವಮಾನಿಸಿದಂತಿದೆ. ನಾವೆಲ್ಲರೂ ನಮ್ಮ ಆಶೋತ್ತರಗಳನ್ನು ಪ್ರತಿನಿಧಿಸುವುದಕ್ಕಾಗಿ ನಮ್ಮ ಪ್ರತಿನಿಧಿಗಳನ್ನು ವಿಧಾನಸಭೆಗೆ ಆರಿಸಿ ಕಳಿಸಿದ್ದೇವೆ. ಆದರೆ ಸದರಿ ಪ್ರತಿನಿಧಿಗಳು ತಮ್ಮ ವೈಯುಕ್ತಿಕ ಹಿತಾಸಕ್ತಿಗಳಿಗೆ ಅಧಿವೇಷನದ ಒಂದು ಮಹಾದವಕಾಶವನ್ನು ಹಾಳುಗೆಡವುತ್ತಿದ್ದಾರೆ ಎಂದು ಛೀಮಾರಿ ಹಾಕಿದ್ದಾರೆ.
ಯಾವೊಂದು ಹಗರಣದ ವಿರುದ್ಧ ಸಂಬಂಧಿಸಿದ ಕಡೆ ದೂರು ದಾಖಲಾಗಲಿ, ಅದನ್ನು ವಿಚಾರಣೆ ಮಾಡಲೆಂದೇ ರಚನೆಗೊಂಡ ಅವು ತಮ್ಮ ತನಿಖೆಯನ್ನು ನಿಷ್ಪಕ್ಷಪಾತದಿಂದ ನಿರ್ವಹಿಸಲು ಅವಕಾಶ ಮಾಡಿಕೊಡಿ. ಅವು ನೀಡಿದ ವರದಿಯ ಅನ್ವಯ ತೀರ್ಪು ನೀಡಲು ನಮ್ಮಲ್ಲಿ ಸಮರ್ಥ ನ್ಯಾಯಾಲಯಗಳಿವೆ. ತಪ್ಪು ಮಾಡಿದವನಿಗೆ ಶಿಕ್ಷೆಯಾಗುವುದು. ಆದರೆ ಈ ಎಲ್ಲಾ ಪ್ರಕ್ರಿಯೆಗಳನ್ನು ಕಡೆಗಣಿಸಿ ಒತ್ತಡ ಹೇರುವುದು ನಿಜಕ್ಕೂ ಪ್ರಜಾಪ್ರಭುತ್ವದ ಆಶಯಗಳಿಗೆ ಖಂಡಿತಾ ಮಾರಕ ಎಂದು ಅವರು ಎಚ್ಚರಿಸಿದ್ದಾರೆ.
ಚರ್ಚೆಗೆ, ಅಧಿವೇಷನದ ಉದ್ಧೇಶಕ್ಕೆ ಅಡ್ಡಿ ಮಾಡುವುದು ಅತ್ಯಂತ ಗಂಭೀರ ಅಪರಾಧವೆಂದು ಇದೇ ಅಧಿವೇಷನದಲ್ಲಿ ಮಂಡಿಸಿ ಭಾರತೀಯ ದಂಡ ಸಂಹಿತೆಯಲ್ಲಿ ಸೇರ್ಪಡೆಗೊಳಿಸಿ, ಚರ್ಚೆಯನ್ನೇ ಮಾಡಲು ಬಿಡದಿರುವುದು, ಅಧಿವೇಷನದ ಉದ್ಧೇಶಗಳ ಈಡೇರಿಕೆಗೆ ಅಡ್ಡಿ ಮಾಡುವುದು ನಮ್ಮ ಪ್ರತಿನಿಧಿಗಳ ವಿಷಯ ರಾಹಿತ್ಯತೆ, ಸೇವಾಮನೋಭಾವನೆ ಕೊರತೆ, ಇಚ್ಛಾಶಕ್ತಿ ಕೊರತೆ, ಬದ್ಧತೆಯ ಕೊರತೆಗೆ ಹಿಡಿದ ಕನ್ನಡಿಯೇ ಆಗಿದೆ. ಜನತೆಯಜಾಶಯಕ್ಕೆ ವ್ಯತಿರಿಕ್ತವಾಗಿ ನಡೆದಿರುವ ನಮ್ಮ ಪ್ರತಿನಿಧಿಗಳನ್ನು ಹಿಂತೆಗೆದುಕೊಳ್ಳುವುದಕ್ಕೂ ಈ ಬಾರಿಯ ಅಧಿವೇಷನದಲ್ಲಿ ಮಂಡನೆಯಾಗಿ ಅನ್ವಯಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ದಿನಬಳಕೆಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಇರುವ ಅವಕಾಶಗಳ ಬಗ್ಗೆ ಚರ್ಚೆಯಾಗಲೀ, ಶಿಕ್ಷಣ ಮಾರಾಟ ನಿಯಂತ್ರಣ ಬಗ್ಗೆ ಚರ್ಚೆಯಾಗಲಿ, ಸಂಪೂರ್ಣ ಉಚಿತ ಆರೋಗ್ಯ ಸೇವೆಗಳ ಅನ್ವಯಿಕೆ ಬಗ್ಗೆ ಚರ್ಚೆಯಾಗಲಿ, ಉದ್ಯೋಗ ಸೃಷ್ಟಿ ಬಗ್ಗೆ ಚರ್ಚೆಯಾಗಲಿ, ಆದರೆ ಈ ಎಲ್ಲಾ ಚರ್ಚೆಗಳಲ್ಲಿ ಆಡಳಿತ-ಪ್ರತಿಪಕ್ಷಗಳೆಲ್ಲಾ ಹೋಮ್ ವರ್ಕ್ ಮಾಡಿ ಅಂಕಿ-ಅಂಶಗಳನ್ನು ಕ್ರೋಢೀಕರಿಸಿ ಚರ್ಚೆಯಲ್ಲಿ ತಮ್ಮ ದೃಷ್ಟಿಕೋನ, ಪ್ರಬುದ್ಧತೆ, ವಿಷಯವಂತಿಕೆ, ಪರಿಶ್ರಮವನ್ನು ಸಾಭೀತುಪಡಿಸಲಿ. ಹೊರೆತು ಚರ್ಚೆಗೇ ಅಡ್ಡಿ ಮಾಡುವುದು ಬೇಡ ಎಂದು ಕಿವಿ ಮಾತು ತಿಳಿಸಿದ್ದಾರೆ.
ಆಡಳಿತಕ್ಕೇ ಅಡ್ಡಿ ಮಾಡುವುದು, ಇಲಾಖೆಗಳ ಕಾರ್ಯಾಚರಣೆಗೆ ಅಡ್ಡಿ ಮಾಡುವುದು, ಇಲಾಖೆಯಲ್ಲಿ ಅಧಿಕಾರಿವರ್ಗವನ್ನು ಆಡಳಿತದ ವಿರುದ್ಧವೇ ಛೂಬಿಟ್ಟು ಯಾವೊಂದೂ ಕೆಲಸ ಆಗದಂತೆ ಗೊಂದಲ ಸೃಷ್ಟಿಸುವುದು, ಇಲಾಖೆಗಳ ಅಧಿಕಾರಿವರ್ಗಗಳನ್ನು ಕೈಗೊಂಬೆಗಳನ್ನು ಮಾಡಿಕೊಂಡು ಕ್ಷುಲ್ಲಕ ರಾಜಕಾರಣ ನಡೆಸುವುದು ಅರಾಜಕತೆಗೆ ನಾಂದಿಯಾಗುವುದು. ಇದರಿಂದ ರಾಜ್ಯಜನತೆಗೆ ತೊಂದರೆ, ಅನಾನುಕೂಲ, ನಷ್ಟವಾಗುವುದು. ಹೀಗಾಗಿ ಜನತೆಯ ಆಶೋತ್ತರಗಳನ್ನು ಪ್ರತಿನಿಧಿಗಳು ನಿರ್ವಹಿಸುವಲ್ಲಿ ನಿರ್ಲಕ್ಷಿಸಿದಲ್ಲಿ ಈ ದಿನದಿಂದಲೇ ಅವರನ್ನು ಹಿಂತೆಗೆದುಕೊಳ್ಳುವುದಕ್ಕಾಗಿ ರಾಜ್ಯವಿಡೀ ಪ್ರತಿಭಟಿಸಲಾಗುವುದು ಎಂದು ಪ್ರಜ್ಞಾವಂತರ ವೇದಿಕೆ ಪರವಾಗಿ ಎಚ್ಚರಿಸಿದ್ದಾರೆ.