ಹಾಸ್ಟಲ್‌ನಲ್ಲಿ ಉತ್ತಮ ವಾತಾವರಣ ನಿರ್ಮಿಸಿ: ಶಾಸಕ ಇಕ್ಬಾಲ್
ರಾಮನಗರ,ಜು.೨೨- ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ, ಉತ್ತಮ ಆಹಾರ ಕೊಡುವ ಜೊತೆಗೆ ಒಂದೇ ಎಂಬ ಭಾವನೆ ಮೂಡುವಂತಹ ವಾತಾವರಣ ನಿರ್ಮಿಸಿ ಎಂದು ವಾರ್ಡನ್‌ಗಳಿಗೆ ಶಾಸಕ ಹೆಚ್.ಎ.ಇಕ್ಬಾಲ್‌ಹುಸೇನ್ ಕಿವಿಮಾತು ಹೇಳಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಇಲಾಖಾ ವಾರ್ಡನ್‌ಗಳ ಸಭೆ ನಡೆಸಿ ಅವರು ಮಾತನಾಡಿದರು. ಹಾಸ್ಟೆಲ್‌ನಲ್ಲಿ ನಿಲಯಪಾಲಕರು ಮಕ್ಕಳಿಗೆ ಕೇವಲ ಊಟ, ವಸತಿ ಕೊಟ್ಟರೆ ಸಾಲದು ಉತ್ತಮ ಶಿಕ್ಷಣ ಕಲಿಕೆಯ ಸಂಸ್ಕಾರವನ್ನು ಸಹ ನೀಡಬೇಕು. ಪೋಷಕರು ತಮ್ಮ ಮಕ್ಕಳನ್ನು ನಿಮ್ಮನ್ನು ನಂಬಿ ಹಾಸ್ಟೆಲ್‌ಗಳಿಗೆ ಸೇರಿಸಿದ್ದಾರೆ. ಅವರು ಉತ್ತಮ ಶಿಕ್ಷಣವನ್ನು ಪಡೆದು ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುವ ಜವಬ್ದಾರಿ ನಿಲಯ ಪಾಲಕರ ಮೇಲಿದೆ. ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಮಕ್ಕಳ ಭವಿಷ್ಯ ರೂಪಿಸಲು ಶ್ರಮಿಸಿ ಆಗ ಮಾತ್ರ ಖರ್ಚು ಮಾಡಿದ ಸರ್ಕಾರದ ಹಣ ಸಾರ್ಥಕವಾಗುತ್ತದೆ ಎಂದರು.
ನಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದ ಸಮಯದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ಎರಡನೇ ಸ್ಥಾನ ಪಡೆದಿತ್ತು, ಪ್ರಶ್ತುತ ಸಾಲಿನಲ್ಲಿ ೨೬ ನೇ ಸ್ಥಾನಕ್ಕೆ ಬಂದಿದ್ದು ನನಗೆ ಬೇಸರ ತಂದಿದೆ. ಶಾಲೆಯಲ್ಲಿ ಶಿಕ್ಷಣ ಜೊತೆಗೆ ಮಕ್ಕಳಿಗೆ ಓದಲು ಬೇಕಾಗುವ ಪುಸ್ತಕಗಳು ಹಾಸ್ಟೆಲ್‌ನಲ್ಲಿಯೇ ಸಿಗುವಂತಾಗಬೇಕು. ರಾತ್ರಿ ೮ ಗಂಟೆಯೊಳಗೆ ಮಕ್ಕಳು ವಿದ್ಯಾರ್ಥಿ ನಿಲಯದಲ್ಲಿರಬೇಕು. ಅವರ ಕಲಿಕೆಗೆ ಬೇಕಾಗುವ ಪುಸ್ತಕಗಳ ಜೊತೆಗೆ ಮಕ್ಕಳಿಗೆ ಶುದ್ದನೀರು, ಬಿಸಿ ನೀರು, ಹೊದಿಕೆಗಳು, ಬೆಡ್ ಸೀಟುಗಳು, ಸ್ವಚ್ಚತೆ ಇರಬೇಕು. ಪ್ರತಿಯೊಬ್ಬ ಮಕ್ಕಳ ಗುಣಮಟ್ಟದ ಶಿಕ್ಷಣ ಮತ್ತು ಅವರ ಮೇಲೆ ನಿಗಾಹಿಡುವಂತೆ ಕೆಲಸ ಮಾಡಿ ಎಂದು ವಾರ್ಡನ್‌ಗಳಿಗೆ ಸೂಚಿಸಿದ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ವಾರ್ಡ್ನ್‌ಗಳು ಇಚ್ಚಾಶಕ್ತಿ ಪ್ರದರ್ಶಸಿದರೆ ಉತ್ತಮ ಫಲಿತಾಂಶ ತರಬಹುದು ಎಂದು ಹೇಳಿದರು.
ಬಿಸಿಎಂ ಇಲಾಖೆ ಸಹಾಯಕ ನಿರ್ದೇಶಕಿ ಮಧುಮಾಲಾ ಮಾತನಾಡಿ ವಸತಿ ನಿಲಯಗಳಲ್ಲಿನ ಮೂಲಭೂತ ಸೌಕರ್ಯಗಳ ಅವಶ್ಯಕತೆಗಳ ಬಗ್ಗೆ ಈಗಾಗಲೇ ಅಪ್‌ಲೋಡ್ ಮಾಡಿರುವುದಾಗಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಕುಮಾರ್ ಮಾತನಾಡಿ ಒಟ್ಟು ೧೬ ಹಾಸ್ಟೆಲ್‌ಗಳಿದ್ದು ೬ ಬಾಡಿಗೆಯಲ್ಲಿ ಇವೆ. ಗೌಸಿಯಾ ಇಂಜಿನಿಯರಿಂಗ್ ಕಾಲೇಜು ಮುಂಭಾಗ ಇರುವ ಹಾಸ್ಟೆಲ್‌ಗೆ ಅಡಿಷನಲ್ ಹಾಸ್ಟೆಲ್ ಬೇಕಿದೆ. ೨ ಹೊಸ ಹಾಸ್ಟೆಲ್ ಸಹ ಮಂಜೂರಾಗಿದ್ದು ನಗರಕ್ಕೆ ಹೊಂದಿಕೊಂಡಂತೆ ಸ್ಥಳ ಬೇಕಿದೆ. ಹೊಸದಾಗಿ ೨ ಮಹರ್ಷಿ ವಾಲ್ಮೀಕಿ ಸಮುದಾಯ ಭವನಕ್ಕೆ ಈ ವರ್ಷ ಅನುದಾನ ಬಂದಿದ್ದು ನಿರ್ಮಾಣಕ್ಕೆ ಜಾಗಬೇಕಿದೆ ಎಂದರು.
ಸಭೆಯಲ್ಲಿ ತಹಸೀಲ್ದಾರ್ ತೇಜಸ್ವಿನಿ, ಇಓ ಪ್ರದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಉಮಾ ವಾರ್ಡನ್‌ಗಳಾದ ಗೀತಾ, ಮಂಜಪ್ಪ, ಉಮಾ, ಸಾಕಮ್ಮ, ಅಲ್ಕಾಧನ ಸೇರಿದಂತೆ ಮತ್ತಿತರರು ಇದ್ದರು.