ಎಸ್ಸಿಎಸ್‌ಪಿ, ಟಿಎಸ್‌ಪಿ ಮೀಸಲು ಹಣ ಗ್ಯಾರಂಟಿಗೆ ಹಿಂತಿರುಗಿಸಲು ದ.ಸಂ.ಸ. ಒತ್ತಾಯ
ಮುಳಬಾಗಿಲು,ಜು,೨೨- ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕೋಮುವಾದ ಘಟ್ಟಿಗೊಳಿಸಲು ಇಡೀ ಭಾರತೀಯರ ಮನಸುಗಳನ್ನು ಛದ್ರಗೊಳಿಸುತ್ತಿದೆ ಎಂದು ದಸಂಸ ಒಕ್ಕೂಟದ ಜಿಲ್ಲಾ ಸಂಘಟನಾ ಸಂಯೋಜಕ ಮೆಕ್ಯಾನಿಕ್ ಶ್ರೀನಿವಾಸ್ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಸಿ ಎಸ್ಟಿ ಬ್ಯಾಕ್ ಲಾಗ್ ಉದ್ಯೋಗಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಉಚ್ಚ ನ್ಯಾಯಾಲಯ ನಿರ್ದೇಶನ ಮಾಡಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಟೀಕಿಸಿದರು.
ಎಸ್ಸಿ ಎಸ್‌ಪಿ/ಟಿಎಸ್‌ಪಿ ಮೀಸಲು ಹಣ ೨೫ ಸಾವಿರ ಕೋಟಿ ರೂ. ಹಣ ರಾಜ್ಯ ಸರ್ಕಾರ ೫ ಗ್ಯಾರಂಟಿಗಳಿಗೆ ಬಳಸಿಕೊಂಡಿದ್ದು ಇದರಿಂದ ಸಮುದಾಯಗಳ ಅಭಿವೃದ್ದಿ ಕುಂಠಿತಗೊಂಡಿದ್ದು ಕೂಡಲೇ ಸದರಿ ಹಣವನ್ನು ಹಿಂತಿರುಗಿಸಬೇಕೆಂದು ಒತ್ತಾಯಿಸಿದರು.
ಎಸ್ಸಿ ಎಸ್‌ಪಿ/ಟಿಎಸ್‌ಪಿ ಕಾಯ್ದೆಯ ಯೋಜನೆಗಳ ಜಾರಿಗೆ ಕೂಡಲೇ ಏಕ ಗವಾಕ್ಷಿ ಪದ್ದತಿ ಜಾರಿಗೊಳಿಸಬೇಕು ಹೊರಗುತ್ತಿಗೆ ನೇಮಕಾತಿಯಲ್ಲಿ ಕಡ್ಡಾಯವಾಗಿ ರೋಸ್ಟರ್ ಪದ್ದತಿಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಸ್ಸಿ ಎಸ್ಟಿ ಮೇರಿಟ್ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹಧನಕ್ಕೆ ವಿಧಿಸಿರುವ ಆದಾಯ ಹಾಗೂ ಅಂಕಗಳ ಮಿತಿ ರದ್ದುಗೊಳಿಸಿ ಈ ಹಿಂದೆ ನಿಗಧಿಪಡಿಸಿದಂತೆ ಮರು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ತಾತಿಕಲ್ಲು ರಾಮಚಂದ್ರಪ್ಪ, ಗಣೇಶ್‌ಪಾಳ್ಯ ಕಿಟ್ಟ, ಗುಜ್ಜಮಾರಡಹಳ್ಳಿ ಜಗದೀಶ್, ಕಪ್ಪಲಮಡಗು ಅಶೋಕ್, ರೆಡ್ಡಿಹಳ್ಳಿ ಅಭಿ, ಬಂಡಹಳ್ಳಿ ಶ್ರೀರಾಮ್, ವಾನಿಗಾನಹಳ್ಳಿ ವೆಂಕಟೇಶಪ್ಪ, ಶಿವಕೇಶವನಗರ ನಾಗರಾಜ್ ಇದ್ದರು.