ಸರಕಾರಕ್ಕೆ ೪೦ ಕೋಟಿ ರೂ. ವಂಚನೆ ಆರೋಪ ರಾಜಕೀಯ ಪಿತೂರಿ
ಕೋಲಾರ,ಜು,೨೨-ಗುರು ಪೂರ್ಣಿಮೆ ಪ್ರಯುಕ್ತ ಎಲ್ಲೆಡೆ ಸಾಯಿಬಾಬಾ ಮಂದಿರ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ ನಡೆಯುತ್ತಿದೆ. ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳಿ ಬದುಕೋಣ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹಾರೈಕೆಯ ನುಡಿಗಳಾಡಿದರು
ಗುರು ಪೂರ್ಣಿಮೆ ಪ್ರಯುಕ್ತ ನಗರದ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮಳೆಯು ಉತ್ತಮವಾಗಿ ಬೀಳುತ್ತಿರುವುದರಿಂದ ರೈತರು, ಕಾರ್ಮಿಕರ ಹಾದಿಯಾಗಿ ಎಲ್ಲರೂ ಸಮೃದ್ಧಿಯಿಂದ ಜೀವನ ನಡೆಸೋಣ ಎಂದು ಆಶಿಸಿದರು.
ಕೋಲಾರದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ವಿಚಾರವಾಗಿ ತಮ್ಮ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲಾಗಿದೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ದೂರು ನೀಡಿದ್ದಾರೆಯೋ ಅವರನ್ನೇ ಕೇಳಿ. ನನಗೆ ಏನು ಗೊತ್ತಿಲ್ಲ ಎಂದು ಮಾಧ್ಯಮದವರಿಗೆ ಉತ್ತರಿಸಿದರು.
ವಿಧಾನಸಭೆ ಇರುವುದು ವಿಷಯಗಳ ಬಗ್ಗೆ ಚರ್ಚೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಅದನ್ನು ಬಿಟ್ಟು ವಿನಾಕಾರಣ ಬೇರೆ ಬೇರೆ ಚರ್ಚೆಗಳಲ್ಲಿ ತೊಡಗುವುದು ಸರಿಯಲ್ಲ ಎನ್ನುವುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಗಳಿಗೆ ಕಡಿಮೆ ಗುಣಮಟ್ಟದ ಅಕ್ಕಿ ಪೂರೈಸಲಾಗುತ್ತಿದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ ಹಾಸ್ಟೆಲ್, ಶಾಲೆಗಳಿಗೆ ಗುಣಮಟ್ಟದ ಅಕ್ಕಿ ನೀಡುವ ಬಗ್ಗೆ ಸಚಿವರೊಂದಿಗೆ ಹಾಗೂ ಸದನದಲ್ಲಿಯೂ ಚರ್ಚಿಸಲಾಗಿದೆ. ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದ ಅಕ್ಕಿ ನೀಡಿಲ್ಲವೆಂದು ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಸರಕಾರಕ್ಕೆ ೪೦ ಕೋಟಿ ರೂ. ವಂಚನೆ ಮಾಡಿರುವ ಆರೋಪವು ರಾಜಕೀಯ ಪಿತೂರಿಯಾಗಿದ್ದು, ಸಿಎಂ ಅಂತಹ ಕೆಲಸ ಮಾಡಿಲ್ಲ, ೮೭ ಕೋಟಿ ಹಗರಣದಲ್ಲಿ ೪೦ ಕೋಟಿರೂ ಜಮಾ ಆಗಿದೆ. ಎಲ್ಲವನ್ನೂ ವಾಪಸ್ ಪಡೆಯಲು ಸರಕಾರ ಕ್ರಮಕೈಗೊಂಡಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ತಿಳಿಸಿದರು.
ಕಾನೂನಿನಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ, ವಿಚಾರವು ತನಿಖಾ ಹಂತದಲ್ಲಿದೆ. ಪೂರ್ಣಗೊಳ್ಳುವವರೆಗೂ ಮಾತನಾಡುವುದು ತಪ್ಪು, ಹಣ ಯಾರು ತೆಗೆದುಕೊಂಡು ಹೋಗಿದ್ದಾರೆ ಅವರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು ಎಂದರು. ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್‌ಬಾಬು, ಉದಯಶಂಕರ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್, ಮಾಜಿ ನಗರಸಭಾ ಸದಸ್ಯ ಚಿಟ್ಟಿ ರಘು ಮುಖಂಡರಾದ ಓಬಿಸಿ ಮಂಜುನಾಥ್, ಮಂಜುನಾಥ್,ಇದ್ದರು.