ಡಾ.ವಿಜಯಾದಬ್ಬೆ ಬಾಳು ವಿಸ್ಮಯ
ಸಂಜೆವಾಣಿ ನ್ಯೂಸ್
ಮೈಸೂರು: ಜು.22:- ಕವಯತ್ರಿ ಡಾ.ವಿಜಯಾದಬ್ಬೆ ಬಾಳು ವಿಸ್ಮಯದ ಜತೆಗೆ ಹೆಮ್ಮೆ ಎಂದು ನಿವೃತ್ತ ಪ್ರಾಂಶುಪಾಲ ಡಾ.ಟಿ.ಎಸ್. ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಸರಸ್ವತಿಪುರಂನಲ್ಲಿರುವ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಭಾನುವಾರ ಸಮತಾ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಡಾ.ವಿಜಯಾದಬ್ಬೆ ಸಾಹಿತ್ಯ ಪ್ರಶಸ್ತಿ ಪ್ರದಾನ, ಕಾವ್ಯ, ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ವಿಜಯಾ ಕಾಲೇಜು ದಿನಗಳಲ್ಲಿಯೇ ಯಾವುದಕ್ಕೂ ಯಾರಿಗೂ ಹೆದರದ ಹೆಣ್ಣು. ಅಪಾರ ಕನಸುಗಳು, ನಿರಂತರ ಓದು, ಏಕಾಂಗಿತನ, ಮೌನಿಯಾಗಿದ್ದರು. ಆರ್ಥಿಕವಾಗಿ ಸದೃಢರಾಗಲು ಉದ್ಯೋಗ ಹಿಡಿಯಲು ಯತ್ನಿಸಿದರು. ಉದ್ಯೋಗ ಸಿಗದಿದ್ದಾಗ ಪ್ರಾಮಾಣಿಕವಾಗಿದ್ದರೆ ಸಮಾಜದಲ್ಲಿ ಬೆಲೆ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದರು. ಸ್ತ್ರೀವಾದಿ ಚಳವಳಿಯಲ್ಲಿ ಪುರುಷರು ಭಾಗವಹಿಸಬೇಕು. ಅವರೂ ಮಾನಸಿಕ ಗುಲಾಮಗಿರಿಯಿಂದ ಬಿಡುಗಡೆ ಪಡೆಯಬೇಕು. ಸ್ತ್ರೀವಾದಿಗಳು ಪರುಷರ ವಿರುದ್ಧವಲ್ಲ. ಪುರುಷರ ಕೆಟ್ಟ ವ್ಯವಸ್ಥೆಯ ವಿರುದ್ಧವೆಂದು ಹೇಳುತ್ತಿದ್ದರು. ಬದುಕಿನಲ್ಲಿ ತುಂಬಾ ಕಷ್ಟಪಟ್ಟ ವಿಜಯಾ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಒಳ್ಳೆಯ ಅಧ್ಯಾಪಕಿ ಎನಿಸಿಕೊಂಡರು. ಸಾಹಿತ್ಯ ವಲಯದಲ್ಲೂ ಗುರುತಿಸಿಕೊಂಡರು. ಹೋರಾಟಗಾರ್ತಿಯಾಗಿ ಒಂದು ನೆಲೆ ಮುಟ್ಟಿದರು. ತನ್ನ ಕುಟುಂಬವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತೇನೆಂದು ಬಲವಾಗಿ ನಂಬಿದ್ದರು. ವಿದೇಶಿ ವ್ಯಕ್ತಿಯನ್ನು ಪತಿಯಾಗಿ ಸ್ವೀಕರಿಸಿದರು. ಇದಕ್ಕೆ ಕುಟುಂಬದ ಸಹಕಾರ ಸಿಗದಿದ್ದಾಗ ನೊಂದುಕೊಂಡರು ಎಂದು ಹೇಳಿದರು.
ಪ್ರಶಸ್ತಿ ಪ್ರದಾನ: ಹಂಪಿ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕಿ ಡಾ.ಎಂ.ಉಷಾ ಅವರ ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಉಷಾ ಅವರ ಬಾಳ ಬಟ್ಟೆ ಕಾದಂಬರಿಗೆ 2024ನೇ ಸಾಲಿನ ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ ನೀಡಲಾಯಿತು. 25 ಸಾವಿರ ರೂ. ನಗದು ಬಹುಮಾನ, ಫಲಕ ನೀಡಿ ಸನ್ಮಾನಿಸಲಾಯಿತು. ಕಾವ್ಯ ವಿಭಾಗದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಅಭಿಷೇಕ್ ವೈ.ಎಸ್ (ಪ್ರಥಮ), ದಾವಣಗೆರೆ ವಿವಿ ರುಜುವಾನ ಕೆ (ದ್ವಿತೀಯ), ಅಮಿತ ಎಂ ಕುಡಚೆ (ತೃತೀಯ). ಲಲಿತಪ್ರಬಂಧ ವಿಭಾಗದಲ್ಲಿ ಕಾಸರಗೋಡು ಕೇರಳ ಕೇಂದ್ರೀಯ ವಿವಿ ಕನ್ನಡ ವಿಭಾಗದ ನವ್ಯಾ ಅರ್ (ಪ್ರಥಮ), ಕೊಡಗಿನ ಡಾ. ಕೆ.ಎಸ್. ಮುಸ್ತಫಾ (ದ್ವಿತೀಯ), ಮಂಗಳೂರು ವಿವಿಯ ವಿವಿಯ ಎಸ್.ಸಂಧ್ಯಾ ತೃತೀಯ ಬಹುಮಾನಗಳನ್ನು ಸ್ವೀಕರಿಸಿದರು. ತೀರ್ಪುಗಾರರ ಮೆಚ್ಚುಗೆ ಪಡೆದ ಕವಿಗಳು, ಪ್ರಬಂಧ ಲೇಖಕರನ್ನು ಸನ್ಮಾನಿಸಲಾಯಿತು.
ಡಾ.ಸಬೀಹಾ ಭೂಮಿಗೌಡ, ಪುಣೆಯ ಸಿಂಬಯಾಸಿಸ್ ಕಾನೂನು ಕಾಲೇಜು ಡೀನ್ ಡಾ.ಶಶಿಕಲಾ ಗುರುಪುರ, ಸಮತಾ ಅಧ್ಯಯನ ಕೇಂದ್ರದ ಧರ್ಮದರ್ಶಿ ಡಾ.ರಾಮಕೃಷ್ಣ ಜೋಷಿ, ಉಪಾಧ್ಯಕ್ಷೆ ಬಿ.ಸಿ. ಮಂಜುಳಾ, ಕಾರ್ಯದರ್ಶಿ ಆರ್.ಸುನಂದಮ್ಮ, ಸಹ ಕಾರ್ಯದರ್ಶಿ ಪಿ.ಓಂಕಾರ್, ಖಜಾಂಚಿ ವಿಜಯಾರಾವ್ ಇದ್ದರು.