ತಂತ್ರಜ್ಞಾನ ಸಾಧನೆಗೆ ಮೂಲ ರಾಜೀವ್‍ಗಾಂಧಿ
ಸಂಜೆವಾಣಿ ನ್ಯೂಸ್
ಮೈಸೂರು: ಜು.22:- ಭಾರತ ತಂತ್ರಜ್ಞಾನದಲ್ಲಿ ಇಷ್ಟೊಂದು ಸಾಧನೆ ಮಾಡಲು ಮೂಲ ರಾಜೀವ್ ಗಾಂಧಿ ಕಾರಣ. ರಾಷ್ಟ್ರದ ಯುವ ನಾಯಕರಾಗಿ ಜನರ ಧ್ವನಿಯಾಗಿದ್ದರು. ಅಂತಹ ಮಹಾನ್ ನಾಯಕರ ರೀತಿಯಲ್ಲಿ ಪಕ್ಷ ಸಿದ್ದಾಂತ ಎಂದರೆ ಅದು ನನ್ನ ಸಿದ್ಧಾಂತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಹೇಳಿದರು.
ಇಂದಿರಾ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದವೀಧರರ ವಿಭಾಗದಿಂದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಮತ್ತು ಜಿಲ್ಲಾ ಪದವೀಧರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ 26 ವಿವಿಧ ಘಟಕಗಳನ್ನು ಪ್ರಾರಂಭಿಸಿದ್ದು ಪಕ್ಷ ಸಂಘಟಿಸಲು ಎಲ್ಲ ರೀತಿಯ ತಯಾರಿ ಮಾಡಲಾಗಿದೆ. ಪಕ್ಷದಿಂದ ಅಧಿಕಾರ ಪಡೆದುಕೊಂಡವರು ಜವಾಬ್ದಾರಿಯಿಂದ ತಮ್ಮ ಕೆಲಸಗಳನ್ನು ನಿರ್ವಹಣೆ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಪಕ್ಷ ಹೆಚ್ಚಿನ ರೀತಿಯಲ್ಲಿ ಸಂಘಟನೆ ಆಗುತ್ತಿದೆ. ರಾಜಕಾರಣ ಮಾಡುವವರು ಪಕ್ಷದ ಆಲೋಚನೆ ಮತ್ತು ಸಿದ್ಧಾಂತಗಳನ್ನು ಒಪ್ಪಿಕೊಂಡಿರಬೇಕು. ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಸರ್ಕಾರ ಬೆಂಗಳೂರು ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಭಾರತದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆಯಿತು. ಪಂಚವಾರ್ಷಿಕ ಯೋಜನೆಗಳ ಮೂಲಕ ಕಾರ್ಖಾನೆಗಳು, ಕೃಷಿ, ಆಹಾರ ಪೂರೈಕೆ ಶಿಕ್ಷಣ ಎಲ್ಲಕ್ಕೂ ಹೆಚ್ಚಿನ ಮಹತ್ವವನ್ನು ಕೊಟ್ಟು ಮುನ್ನಡೆಸಿಕೊಂಡು ಬಂದಿದೆ ಎಂದರು.
ಕರ್ನಾಟಕದಲ್ಲಿ ಮೈಸೂರು ಜಿಲ್ಲಾ ಗ್ರಾಮಂತರ ಕಾಂಗ್ರೆಸ್ ಸಮಿತಿ ಅಗ್ರಸ್ಥಾನದಲ್ಲಿರುವುದು ಹೆಮ್ಮೆ. ಸತತ 10 ವರ್ಷಗಳ ಕಾಲ ಪಕ್ಷವನ್ನು ಮುನ್ನಡೆಸಿದ ಕೀರ್ತಿ ಅಧ್ಯಕ್ಷ ಡಾ.ಬಿಜೆವಿಗೆ ಸಲ್ಲುತ್ತದೆ ಎಂದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯ ವಕ್ತಾರ ಅನಿಲ್ ಕುಮಾರ್ ತಡಕಲ್ ರಾಜಕಾರಣದಲ್ಲಿ ಯುವ ಪರ್ವ, ಅನಿವಾರ್ಯತೆ ಎಂಬ ವಿಷಯ ಆಧರಿಸಿ ಮಾತನಾಡಿ, ಪ್ರತಿ ಮನೆಯಲ್ಲಿ ರಾಜಕೀಯದ ವಿಷಯವಾಗಿ ಚರ್ಚೆ ನಡೆಯಬೇಕು. ಪ್ರತಿಯೊಬ್ಬರ ನಡೆ ಮತ್ತು ಆಲೋಚನೆ, ರಾಜಕೀಯವಾಗಿರುತ್ತದೆ. ರಾಜಕಾರಣದ ಹೊರತಾದ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬ ಯುವಕರು ಕೂಡ ಪ್ರಗತಿಪರ ಆಲೋಚನೆಗಳ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಉತ್ತಮ ದೇಶ ಕಟ್ಟಲು ಸಾಧ್ಯ ಎಂದು ಹೇಳಿದರು.
ಐಡಿಯಾಲಜಿಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಅವರು, ಮತ ಚಲಾವಣೆ ಮಾಡುವುದು ಮತ ಚಲಾವಣೆ ಮಾಡದೆ ಇರುವುದು ಎಲ್ಲವೂ ಕೂಡ ಒಂದು ಐಡಿಯಾಲಜಿಗೆ ಸಂಬಂಧಿಸಿದ ವಿಚಾರ. ಡಾ.ಬಿ.ಆರ್.ಅಂಬೇಡ್ಕರ್ ಮತದಾನದ ಹಕ್ಕನ್ನು ನೀಡಿದ್ದು ಇದನ್ನು ಚಲಾಯಿಸುವ ಪ್ರತಿಯೊಬ್ಬರು ರಾಜಕಾರಣದ ಆಲೋಚನೆಗೆ ಒಳಪಟ್ಟಿರುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್ ಮಾತನಾಡಿ, ಪ್ರಮುಖ 5 ಆದೇಶಗಳನ್ನು ಜಿಲ್ಲಾ ಪದವೀಧರ ಘಟಕಕ್ಕೆ ನೀಡಿದರು. ನೂತನ ವೆಬ್‍ಸೈಟ್ ಮೂಲಕ ಎಲ್ಲಾ ಪದವೀಧರರಿಗೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ಆಮಂತ್ರಣ ನೀಡುವುದು, ಎಲ್ಲಾ ತಾಲೂಕು ಕೇಂದ್ರಗಳ ಪದವಿ ಕಾಲೇಜುಗಳಲ್ಲಿ ಪದವೀಧÀರ ಘಟಕ ಆರಂಭಿಸುವುದು, ನಿವೃತ್ತ ಕೆಎಎಸ್ ಐಎಎಸ್, ಅಧಿಕಾರಿಗಳ ತಜ್ಞರ ಸಮಿತಿಯಿಂದ ಗ್ರಾಜುಯೆಟ್ಸ್ ಅಡ್ವೈಸರಿ ಕೌನ್ಸಿಲ್ ಆರಂಭಿಸುವುದು, ರಾಜ್ಯ ಸರ್ಕಾರದ ಯುವ ನಿಧಿ ಸದುಪಯೋಗಕ್ಕೆ ಡಿಸ್ಟ್ರಿಕ್ ಯುವನಿಧಿ ವಾರ್ ರೂಮ್ ಆರಂಭಿಸುವುದು, ಯುವ ಸಮುದಾಯಕ್ಕೆ ಅನುಕೂಲವಾಗುವಂತಹ ವಿಷಯಾಧಾರಿತ ತಿಂಗಳ ಪತ್ರಿಕೆಯನ್ನು ಈ ಘಟಕದಿಂದ ಹೊರ ತರುವುದು ಎಂದು ಪಕ್ಷದ ಪರವಾಗಿ ಆದೇಶ ಮಾಡಿದರು .
ಸಭೆಯಲ್ಲಿ ರಾಜ್ಯ ಪದವೀಧರ ಘಟಕದ ಅಧ್ಯಕ್ಷ ನಟರಾಜ್ ಗೌಡ, ಮೈಸೂರು ಜಿಲ್ಲಾ ಕಾಂಗ್ರೆಸ್ ಪದವೀಧರ ಘಟಕದ ನೂತನ ಅಧ್ಯಕ್ಷ ಸಿದ್ದಾರ್ಥ್ ನಾಯಕ ಅವರಿಗೆ ಕಾಂಗ್ರೆಸ್ ಧ್ವಜ ನೀಡುವುದರ ಮೂಲಕ ಹೊಸ ಜವಾಬ್ದಾರಿ ನೀಡಿದರು.
ಹುಣಸೂರು ಬಸವಣ್ಣ, ಶಿವಪ್ರಸಾದ್, ಶಾಮಾ, ಯೋಗಿಶ್, ಲಕ್ಷ್ಮಣ್, ಉತ್ತನಹಳ್ಳಿ ಶಿವಣ್ಣ, ರಾಹುಲ್ ಕುಂಬರಹಳ್ಳಿ, ಜಮೀರ್, ಪುಟ್ಟಸ್ವಾಮಿ, ಸಿದ್ದರಾಜು, ಅಪ್ಪು ಇದ್ದರು.