ಸರ್ಕಾರ ಸಂತ್ರಸ್ತರಿಗೆ ನ್ಯಾಯ ಒದಗಿಸಲಿ
ಸಂಜೆವಾಣಿ ನ್ಯೂಸ್
ಮೈಸೂರು: ಜು.22:- ಸಹೋದರರಿಗೆ ಮಾಹಿತಿ ನೀಡದೇ ಪಿತ್ರಾರ್ಜಿತ ಆಸ್ತಿಯನ್ನು ದೇವರಾಜು ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುಸ್ವಾಮಿ ಅವರಿಗೆ ಜಮೀನು ಮಾರಾಟ ಮಾಡಿದ್ದು, ಈ ಹಿನ್ನೆಲೆಯಲ್ಲಿ ದೇವರಾಜು ಸಹೋದರರ ಮಕ್ಕಳು ನ್ಯಾಯಕ್ಕಾಗಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಂತ್ರಸ್ತರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಮಾಜಿ ಸಚಿವ ಎನ್.ಮಹೇಶ್ ಆಗ್ರಹಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿಂಗ ಬಿನ್ ಜವರಯ್ಯ ಎಂಬುವರಿಗೆ ಮಲ್ಲಯ್ಯ, ಮೈಲಾರಯ್ಯ, ದೇವರಾಜು ಮೂವರು ಮಕ್ಕಳು. ನಿಂಗ ಅವರು 1965ರಲ್ಲಿ ಮೃತರಾಗುತ್ತಾರೆ. 1968ರಲ್ಲಿ ದೇವರಾಜು ಹಾಗೂ ಮಲ್ಲಯ್ಯ ಇಬ್ಬರೂ ಆಸ್ತಿಯ ಹಕ್ಕು ಖುಲಾಸೆ ಪತ್ರವನ್ನು ಮೈಲಾರಯ್ಯ ಅವರಿಗೆ ಬರೆದುಕೊಟ್ಟಿದ್ದಾರೆ. ನಿಂಗ ಅವರ ಹೆಂಡತಿ ನಿಂಗಮ್ಮ 1990ರಲ್ಲಿ ನಿಧನರಾಗುತ್ತಾರೆ. ಇದಾದ ಬಳಿಕ ದೇವರಾಜು ಅವರು 1993ರಲ್ಲಿ ಮೈಲಾರಯ್ಯ ಹೆಂಡತಿ ಹಾಗೂ ಮಗ ಮಂಜುನಾಥಸ್ವಾಮಿ ಅವರನ್ನು ಪರಿಹಾರ ಅಥವಾ ಹಣವನ್ನು ನೀಡುವ ಆಮೀಷ ಒಡ್ಡಿ ಸರ್ವೇ ನಂ.464ರ 3.16 ಎಕರೆ ಭೂಮಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಮಹೇಶ್ ಆರೋಪಿಸಿದರು.
ದೇವರಾಜು ಅವರು ತಮ್ಮ ಅಣ್ಣಂದಿರಾದ ಮಲ್ಲಯ್ಯ ಹಾಗೂ ಮೈಲಾರಯ್ಯ ಅವರ ಮಕ್ಕಳಿಗೆ ವಂಚನೆ ಮಾಡಿದ್ದು, ಈ ವಿಚಾರವಾಗಿ ಮಲ್ಲಯ್ಯ ಅವರ ಮಗ ಜವರಯ್ಯ ಅಪರ ಜಿಲ್ಲಾಧಿಕಾರಿಗಳಿಗೆ ನ್ಯಾಯ ಕೊಡಿಸುವಂತೆ ಮನವಿ ನೀಡಿದ್ದಾರೆ. ಆದ್ದರಿಂದ ಈ ಅನ್ಯಾಯ ಸರಿಪಡಿಸುವವರೆಗೂ ಬಿಜಿಪಿ ವತಿಯಿಂದ ಹೋರಾಟ ನಡೆಸಲಿದ್ದೇವೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಸ್ಥಳೀಯ ಶಾಸಕರು, ಮುಖಂಡರೂ ಕೂಡಾ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಶೀಘ್ರವೇ ಈ ವಂಚನೆ ಪ್ರಕರಣಕ್ಕೆ ನ್ಯಾಯ ನೀಡಬೇಕು ಎಂದು ತಿಳಿಸಿದರು.
50:50 ಅನುಪಾತದ ನಿವೇಶನ ವಿಚಾರ, ಬೇರೆ ರಾಜಕೀಯ ವಿಚಾರ ಇವು ಯಾವುದೇ ಉದ್ದೇಶ ನಮಗೆ ಇಲ್ಲ. ದಲಿತ ಕುಟುಂಬಕ್ಕೆ ಅನ್ಯಾಯವಾಗಿದೆ ಎನ್ನುವ ಮಾಹಿತಿಯನ್ನು ಮಾಧ್ಯಮಗಳ ಮೂಲಕ ತಿಳಿದ ಮೇಲೆ ಅವರಿಗೆ ನ್ಯಾಯಕೊಡಿಸುವ ಸಲುವಾಗಿ ಹೋರಾಟ ಮಾಡಲು ಬಂದಿದ್ದೇನೆ. ಮುಡಾದಲ್ಲೇ ಅಷ್ಟೇ ಅಲ್ಲ ಇಡೀ ರಾಜ್ಯದಲ್ಲಿ ಎಲ್ಲಿಯಾದರೂ ಸರಿ ದಲಿತರ ಜಮೀನುಗಳ ವಿಚಾರದಲ್ಲಿ ಅನ್ಯಾಯವಾಗುತ್ತಿದೆ ಎಂದು ಗೊತ್ತಾದರೆ ಅಲ್ಲಿಗೆ ಹೋಗಿ ಹೋರಾಟ ಮಾಡುತ್ತೇನೆ ಎಂದು ಇದೇ ವೇಳೆ ಮಹೇಶ್ ಸ್ಪಷ್ಟನೆಯನ್ನೂ ನೀಡಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಶಾಸಕ ಎಸ್.ಬಾಲರಾಜು, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ಆರ್.ರಘು, ಮಾಜಿ ಉಪ ಮೇಯರ್ ಶೈಲೇಂದ್ರ, ಪಾಲಿಕೆ ಮಾಜಿ ಸದಸ್ಯ ಅಶ್ವಿನಿ ಶರತ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.