ನಗರದ ವಿವಿಧೆಡೆ ಗುರುಪೂರ್ಣಿಮೆ ಆಚರಣೆ
ಸಂಜೆವಾಣಿ ನ್ಯೂಸ್
ಮೈಸೂರು: ಜು.22:- ನಗರದಲ್ಲೆಡೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗುರು ಪುರ್ಣಿಮೆಯನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಶಿಷ್ಯಂದಿರು ಗುರುವಿಗೆ ನಮನ ಸಲ್ಲಿಸಿದರೆ, ದೇವಸ್ಥಾನಗಳು ಹಾಗೂ ಧಾರ್ಮಿಕ ಸಂಸ್ಥೆಗಳಲ್ಲಿ ಧಾರ್ಮಿಕ ವಿಧಿವಿಧಾನದ ಮೂಲಕ ಸಂಭ್ರಮದಿಂದ ಗುರುಪೂರ್ಣಿಮೆ ಆಚರಿಸಲಾಯಿತು. ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸಿದರು.
ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಇತರ ದಿನಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಗುರು ಎಂದರೆ ಅಂಧಕಾರ ಅಥವಾ ಅಜ್ಞಾನ ದೂರ ಮಾಡುವವರು. ಹೀಗಾಗಿ ನಗರದ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರು ಪೂರ್ಣಿಮೆ ಆಚರಿಸಲಾಯಿತು. ತ್ಯಾಗರಾಜ ರಸ್ತೆಯಲ್ಲಿರುವ ಸಾಯಿಬಾಬಾ ಮಂದಿರ, ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಗಣಪತಿ ಸಚ್ಚಿದಾನಂದ ಆಶ್ರಮ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.
ಹೆಬ್ಬಾಳ್‍ನ ಸಿರಡಿ ಸಾಯಿ ಸೇವಾಶ್ರಮ ಟ್ರಸ್ಟ್, ರಾಮಕೃಷ್ಣ ನಗರದ ಶ್ರೀ ಪ್ರಸನ್ನ ಗಣಪ ಮತ್ತು ಶಿರಡಿ ಸಾಯಿ ಶಕ್ತಿ ಸನ್ನಿಧಿ ಚಾರಿಟಬಲ್ ಟ್ರಸ್ಟ್, ಮಹರ್ಷಿ ಪತಂಜಲಿ ಧ್ಯಾನ ಕೇಂದ್ರ, ಬೋಗಾದಿಯ ಶ್ರೀ ಯಾಜ್ಞವಲ್ಕ್ಯ ಶುಕ್ಲ ಯಜುರ್ವೇದ ಮಹಾಸಭಾದಿಂದ ಗುರುಪೂರ್ಣಿಮೆ ಆಚರಿಸಲಾಯಿತು.
ಪ್ರತಿಯೊಂದರ ಹಿಂದೆಯೂ ಗುರುವಿದ್ದಾರೆ: ಭಾರತೀಯ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ಗುರುಪೂರ್ಣಿಮೆ ಆಚರಿಸಲಾಗುತ್ತಿದೆ. ಪ್ರತಿಯೊಂದರ ಹಿಂದೆ ಗುರುವಿನ ಅವಶ್ಯಕತೆವಿದ್ದು, ಗುರುವಿನ ಆಶೀರ್ವಾದವಿದ್ದರೆ ಎಲ್ಲವನ್ನು ಸಾಧಿಸಬಹುದು ಎಂದು ಶಾಸಕ ಕೆ.ಹರೀಶ್‍ಗೌಡ ತಿಳಿಸಿದರು.
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ಸುಶಮಿಂದ್ರತೀರ್ಥ ಸೇವಾ ಸಮಿತಿ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಈ ವೇಳೆ ಮಾತನಾಡಿದ ಅವರು, ಭಾರತೀಯ ಪರಂಪರೆಯಲ್ಲಿ ಮಠಗಳ ಪಾತ್ರ ಅಮೋಘವಾಗಿದ್ದು, ಪ್ರತಿಯೊಂದು ಮಠಗಳಿಗೆ ಭಕ್ತರೇ ಆಧಾರ ಸ್ಥಂಭ. ಧರ್ಮ ಪರಂಪರೆ ಉಳಿಸಿಕೊಂಡು ಬರುವಲ್ಲಿ ಮಠಮಾನ್ಯಗಳ ಸೇವೆ ಅಮೋಘ, ಹೆತ್ತ ತಂದೆ ತಾಯಿ ಮತ್ತು ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ ಎಂದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಕೆಪಿಸಿಸಿ ಸದಸ್ಯ ನಜರ್‍ಬಾದ್ ನಟರಾಜ್, ಶ್ರೀ ಸುಶಮಿಂದ್ರತೀರ್ಥ ಸೇವಾ ಸಮಿತಿ ಅಧ್ಯಕ್ಷ ನಾಗರಾಜು, ಗೌರವಾಧ್ಯಕ್ಷ ಜಿ.ರವಿ, ಓಂಕಾರ್ ಸೌಂಡ್ ಸಿಸ್ಟಮ್ ಆನಂದ್, ಉಪಾಧ್ಯಕ್ಷ ವರುಣ ಮಹದೇವ್, ಕಾರ್ಯದರ್ಶಿ ಮಹದೇವ್, ಗಿರೀಶ್ ಗೌಡ, ಸಂಚಾಲಕ ಲೋಕೇಶ್, ಸಮಿತಿ ಸದಸ್ಯರಾದ ಮಹದೇವ್, ರವಿಚಂದ್ರ, ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಉದ್ಯಮಿ ರಾಜೇಶ್ ಪಳನಿ, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಎಸ್.ಎನ್.ರಾಜೇಶ್, ನವೀನ್, ಸುಬ್ಬಣ್ಣ ಇದ್ದರು.
ಗುರುವಿನ ಕೃಪೆಯಿದ್ದರೆ ಗುರಿ ಸಾಧನೆ: ಗುರುವಿನ ಕೃಪೆ ಇಲ್ಲದೆ ನಾವು ಯಾವುದೇ ಗುರಿ ಮುಟ್ಟಲು ಸಾಧ್ಯವಿಲ್ಲ. ಹಾಗಾಗಿ ಪ್ರತಿನಿತ್ಯ ಗುರು ಸ್ಮರಣೆ ಮಾಡಬೇಕು ಎಂದು ಅವದೂತ ಪೀಠದ ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.
ಅವಧೂತ ದತ್ತ ಪೀಠದ ಪ್ರಾರ್ಥನಾ ಮಂದಿರದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಪೂಜಾ ಕಾರ್ಯಗಳನ್ನು ನೆರವೇರಿಸಿ ಭಕ್ತರಿಗೆ ಆಶೀರ್ವಚನ ನೀಡಿ ಶ್ರೀಗಳು ಮಾತನಾಡಿದರು. ನಮ್ಮ ಗುರಿ ಮುಟ್ಟಲು ಭಕ್ತಿ, ಶ್ರದ್ಧೆ ಇರಬೇಕು ಅಂತವರಿಗೆ ಮಾತ್ರ ಗುರು ಕೃಪೆ ಸಿಗುತ್ತದೆ. ಇಂದು ವ್ಯಾಸ ಪೂರ್ಣಿಮೆ, ಆ ಭಗವಂತನೇ ವೇದವ್ಯಾಸರ ರೂಪದಲ್ಲಿ ಇಳಿದುಬಂದು ನಮಗೆ ಜ್ಞಾನ ನೀಡಿದ್ದಾನೆ. ಗುರುವಿನ ಮೂಲಕ ಜ್ಞಾನ ಸಂಪಾದನೆ ಮಾಡಬೇಕು. ಗುರು ಇಲ್ಲದೆ ಗುರಿ ಮುಟ್ಟಲು ಖಂಡಿತ ಸಾಧ್ಯವಿಲ್ಲ. ಹಾಗಾಗಿ ಗುರುಸ್ಮರಣೆ ನಿರಂತರವಾಗಿರಬೇಕು. ನಾವು ಈ ದಿನ ವೇದವ್ಯಾಸರನ್ನು ಸ್ಮರಿಸಬೇಕು. ಜ್ಞಾನ ಪ್ರತಿಯೊಬ್ಬರಿಗೂ ಬೇಕೇ ಬೇಕು ನಮಗೆಲ್ಲರಿಗೂ ಶ್ರೀ ಕೃಷ್ಣನೇ ಮೊದಲ ಗುರು. ಯುದ್ಧ ಮಾಡಿಸಿದ ಕೃಷ್ಣ ಬೇರೆ, ಗೀತ ಬೋಧನೆ ಮಾಡಿದ ಕೃಷ್ಣ ಬೇರೆ ಎಂದು ನಾವು ತಿಳಿದಿದ್ದೇವೆ ಆದರೆ ಅದೆಲ್ಲ ಮಾಯೆ ಇಬ್ಬರೂ ಕೃಷ್ಣನ್ನು ಒಂದೇ. ಧರ್ಮ ಸಂರಕ್ಷಣೆಗೆ ಕೃಷ್ಣ ಯುದ್ಧ ಮಾಡಿದ ಜ್ಞಾನ ಸಂಪಾದನೆಗೆ ಗೀತ ಬೋಧನೆ ಮಾಡಿದ ಎಂದು ವಿವರಿಸಿದರು.
ಮುಂಜಾನೆಯಿಂದಲೇ ಗುರುಪೂರ್ಣಿಮೆ ಪ್ರಯುಕ್ತ ಶ್ರೀ ದತ್ತ ವಿಜಯಾನಂದ ತೀರ್ಥ ಸಾಮೀಜಿಯವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ವೆಂಕಟೇಶ್ವರ ಸನ್ನಿಧಿ ಮತ್ತು ಕಾರ್ಯಸಿದ್ದಿ ಹನುಮಾನ್ ಮಂದಿರಗಳಲ್ಲಿ ಪೂಜೆ ನೆರವೇರಿಸಿ ನಂತರ ಶ್ರೀ ಗುರು ದತ್ತಾತ್ರೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ದತ್ತ ಮಂದಿರಕ್ಕೆ ಕಿರಿಯ ಶ್ರೀಗಳ ನೇತೃತ್ವದಲ್ಲಿ ತರಲಾಯಿತು. ಗೋಪೂಜೆ ನೆರವೇರಿಸಿದ ನಂತರ ಶ್ರೀ ದತ್ತ ವಿಜಯಾನಂದ ತೀರ್ಥ ಸಾಮೀಜಿಯವರು ಪ್ರಾರ್ಥನಾ ಮಂದಿರದಲ್ಲಿರುವ ಎಲ್ಲಾ ದೇವರುಗಳಿಗೂ ಪೂಜೆ ಸಲ್ಲಿಸಿದರು.