ಜನಪರ ಕಾರ್ಯಕ್ರಮಗಳಿಂದ ಕುಮಾರಣ್ಣ ಹೆಸರಾಗಿದ್ದಾರೆ: ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.22: ಕುಮಾರಣ್ಣ ತಮ್ಮ ಜನಪರ ಕಾರ್ಯಕ್ರಮಗಳಿಂದಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು. ಅವರ ಜನತಾದರ್ಶನ, ಗ್ರಾಮ ವಾಸ್ತವ್ಯ, ಲಾಟರಿ ನಿಷೇದ, ಮುಂತಾದ ಕಾರ್ಯಕ್ರಮಗಳು ಮೋದಿಯವರ ಮನಸ್ಸನ್ನು ಗೆದ್ದಿವೆ. ಆದ್ದರಿಂದ ಮೋದಿಯವರು ಕುಮಾರಣ್ಣನನ್ನು ಕ್ಯಾಬಿನೆಟ್ ಸಚಿವರನ್ನಾಗಿ ನೇಮಿಸಿದ್ದಾರೆ. ತಾಲ್ಲೂಕಿನಲ್ಲಿ ಹಾದುಹೋಗಿರುವ ಶ್ರೀರಂಗಪಟ್ಟಣ ಅರಸೀಕೆರೆವರೆಗಿನ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಿ ಅಭಿವೃದ್ದಿ ಪಡಿಸಬೇಕು. ಪಾಂಡವಪುರದಿಂದ-ಚನ್ನರಾಯಪಟ್ಟಣವರೆಗೆ ರೈಲ್ವೆ ಮಾರ್ಗ ನಿರ್ಮಾಣ ಮಾಡುವುದು, ಕಬ್ಬು ಕೂಡ ತೋಟಗಾರಿಕಾ ಬೆಳೆಯಾಗಿದ್ದು ಕಬ್ಬು ಬೆಳೆಗಾರರನ್ನು ನರೇಗಾ ಯೋಜನೆಯ ವ್ಯಾಪ್ತಿಗೆ ತರಬೇಕು. ತಾಲ್ಲೂಕಿನ ಐದು ಸಾವಿರ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದಿಮೆಗಳ ಸ್ಥಾಪನೆಗೆ ಕ್ರಮವಹಿಸಬೇಕು. ಈಗಾಗಲೆ 2-3 ಕಡೆಗಳಲ್ಲಿ ಜಮೀನನ್ನು ಮೀಸಲಿಡಲಾಗಿದೆ. ತಾಲ್ಲೂಕಿನ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಅವುಗಳನ್ನು ರಿಪೇರಿ ಮಾಡಿಸಿಕೊಡುವಂತೆ ಮನವಿ ಮಾಡಿದರು.
ಕುಮಾರಣ್ಣನವರಿಗೆ ಮನವಿ ನೀಡಿದ 1-2 ದಿನಗಳಲ್ಲಿ ರೈಲ್ವೆ ಹಿರಿಯ ಅಧಿಕಾರಿಗಳು ತಾಲ್ಲೂಕಿಗೆ ಭೇಟಿ ನೀಡಿ ಮೇಲ್ಸೇತುವೆ, ಮತ್ತು ಅಂಡರ್‍ಪಾಸ್ ನಿರ್ಮಾಣಕ್ಕೆ 50 ಕೋಟಿ ಬಿಡುಗಡೆ ಮಾಡಿಸಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಕೇಂದ್ರಸಚಿವ ಹೆಚ್.ಡಿ.ಕುಮಾರಸ್ವಾಮಿಯವರನ್ನು ಪಟ್ಟಣದ ಹೊರವಲಯದ ದೇವೇಗೌಡ ಅಭಿಮಾನಿ ಬಳಗದ ಕಛೇರಿಯ ಬಳಿಯಿಂದ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು. ವೇದಿಕೆ ಹತ್ತುವ ಮುನ್ನ ಕುಮಾರಸ್ವಾಮಿಯವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಶ್ರವಣಬೆಳಗೊಳ ಶಾಸಕ ಸಿ.ಎನ್. ಬಾಲಕೃಷ್ಣ, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು, ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ, ಮನ್ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರ, ಎಸ್.ಪಿ.ಸ್ವಾಮಿ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸಾ.ರಾ.ಮಹೇಶ್, ಹಾಸನ ಶಾಸಕ ಸ್ವರೂಪ್‍ಪ್ರಕಾಶ್, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಜಿಪಂ ಮಾಜಿ ಸದಸ್ಯರಾದ ಅಶೋಕ್, ರವಿ, ರಾಜ್ಯ ಮಾರಾಟ ಮಹಾ ಮಂಡಳಿಯ ನಿರ್ದೇಶಕ ಪುಟ್ಟಸ್ವಾಮಿಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನಲ್ಲಿಗೆರೆಬಾಲು, ಶಾಸಕರ ಸಹೋದರ ಹೆಚ್.ಟಿ.ಲೋಕೇಶ್, ಮೂಡ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್ ಸೇರಿದಂತೆ ತಾಲ್ಲೂಕಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.