ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು ಭಾರತೀಯ ಸನಾತನ ಧರ್ಮದ ಮುಖ್ಯ ಗುರಿಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.22- ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು ಭಾರತೀಯ ಸನಾತನ ಧರ್ಮದ ಮುಖ್ಯ ಗುರಿ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ಎಂದು ತಿಳಿಸಿದರು.
ಅವರು ವ್ಯಾಸ ಪೂರ್ಣಮಿಯ ಅಂಗವಾಗಿ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಮುಖ್ಯ ಸಂಚಾಲಕರಾದ ರಾಜಯೋಗಿನಿ ಬಿಕೆ ದಾನೇಶ್ವರಿ ರವರಿಗೆ ಗೌರವ ಸಮರ್ಪಣ ಕಾರ್ಯಕ್ರಮದಲ್ಲಿ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕøತ ಸುರೇಶ್ ಎನ್ ಋಗ್ವೇದಿರವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಪೂರ್ಣತೆ, ಸಂಪನ್ನತೆ, ಸಂಪೂರ್ಣತೆಗೆ ಕೊಂಡೊಯ್ಯುವ ಗುರು ಸತ್ಯ ಜ್ಞಾನವನ್ನು, ಸತ್ಯಮಾರ್ಗವನ್ನು, ಸನ್ಮಾರ್ಗವನ್ನು ತೋರಿಸುತ್ತಾರೆ. ಗುರುಗಳಿಗೆ ಕೃತಜ್ಞತೆ ಸಲ್ಲಿಸುವುದು ಭಾರತೀಯ ಸನಾತನ ಧರ್ಮದ ಮುಖ್ಯ ಗುರಿಯಾಗಿದೆ. ಪ್ರತಿಯೊಬ್ಬರಿಗೂ ಗುರು ಅಗತ್ಯ. ಗುರು ಜ್ಞಾನದ ಬೆಳಕು. ಮುಕ್ತಿಯ ಮಾರ್ಗದರ್ಶಕ ಸನ್ಮಾರ್ಗದ ಶ್ರೇಷ್ಠತೆಯ ಮೂಲಕ ಶಿಷ್ಯ ವೃಂದಕ್ಕೆ ಆಧ್ಯಾತ್ಮಿಕ ಮೌಲ್ಯಗಳನ್ನ, ಆತ್ಮದ ಶಕ್ತಿಯನ್ನು, ಜೀವನದ ಸಂದೇಶಗಳನ್ನ ತಲುಪಿಸುವ ಗುರು ಮತ್ತು ಎಲ್ಲಾ ಸದ್ಗುರುಗಳಿಗೆ ನಮನಗಳನ್ನು ಸಲ್ಲಿಸುವ ದಿನವಾಗಿದೆ ಎಂದರು.
ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ಮಾತನಾಡಿ ವ್ಯಾಸ ಪೂರ್ಣಿಮೆಯನ್ನು ಗುರುಪೂರ್ಣಿಮೆ ಆಗಿ ಆಚರಿಸಲಾಗುತ್ತದೆ. ಭಾರತೀಯ ಸನಾತನ ಧರ್ಮದಲ್ಲಿ ಬಹು ಮುಖ್ಯವಾದ ಕಾರ್ಯವಾಗಿದೆ. ವ್ಯಾಸರು ಭಗವಂತನ ಅವತಾರವಾಗಿ ಭಾರತೀಯ ಸನಾತನ ಧರ್ಮದ ಸಾಹಿತ್ಯ, ಸಂಸ್ಕೃತಿಯ, ಧರ್ಮದ ಮೌಲ್ಯಗಳಾದ ವೇದಗಳನ್ನು ವಿಭಜಿಸಿ ಋಗ್ವೇದ, ಯಜುರ್ವೇದ ,ಸಾಮವೇದ, ಅಥರ್ವಣವೇದಗಳನ್ನು ನೀಡಿ ಸಂಸ್ಕೃತಿಯ ದಿವ್ಯ ಸಂದೇಶಗಳನ್ನು ಅರ್ಥ ಮಾಡಿಸಿದ ಮಹಾನ್ ವ್ಯಕ್ತಿ ಹಾಗೂ ಶಕ್ತಿ. ವ್ಯಾಸರ ಜನ್ಮದಿನವೇ ಗುರುಪೂರ್ಣಿಮೆಯಾಗಿದ್ದು ಮಾನವ ಜನಾಂಗ ಸರ್ವ ರೀತಿಯಲ್ಲಿಯೂ ಸನ್ಮಾರ್ಗದಲ್ಲಿ ನಡೆಯಲು ಗುರುಗಳ ಅಗತ್ಯ ಹಾಗೂ ಮಾರ್ಗದರ್ಶನ, ಸಲಹೆ, ಶುಭ ಹಾರೈಕೆ ತುಂಬಾ ಅಗತ್ಯವಿದೆ. ಸರ್ವರನ್ನು ಗುರು ಭಕ್ತಿಯೊಂದೇ ಕಾಪಾಡುತ್ತದೆ. ಗುರುಭಕ್ತಿಯನ್ನು ಸದಾ ಇಟ್ಟುಕೊಳ್ಳೋಣ. ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳೋಣ. ಗುರುಗಳನ್ನು ಗೌರವಿಸಿ ಸಂತೋಷ ಪಡೋಣ ಎಂದು ತಿಳಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ರವರು ಹಲವು ದಶಕಗಳಿಂದ ಚಾಮರಾಜನಗರದಲ್ಲಿ ಜನತೆಗೆ ಸನ್ಮಾರ್ಗದ ದಿವ್ಯ ಸ್ಪೂರ್ತಿಯ ಸಂದೇಶಗಳನ್ನು ನೀಡಿ, ಶಾಂತಿಯ ಜೀವನವನ್ನ ನಡೆಸಲು ಗುರುವಾಗಿ ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಗೀತ, ಬಿಕೆ ಆರಾಧ್ಯ, ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷೆ ಶರಣ್ಯ ಎಸ್ ಋಗ್ವೇದಿ ಉಪಸ್ಥಿತರಿದ್ದರು.