ಸೇವೆ ಮಾಡುವ ಮೂಲಕ ನಿಮ್ಮ ಪ್ರೀತಿ ವಿಶ್ವಾಸಗಳಿಸುತ್ತೇನೆ: ಹೆಚ್.ಡಿ.ಕೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.22: ಸೇವೆ ಮಾಡುವ ಮೂಲಕ ನಿಮ್ಮ ಪ್ರೀತಿ ವಿಶ್ವಾಸಗಳಿಸುತ್ತೇನೆ. ಜಿಲ್ಲೆಯ ಜನರ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಅವರು ಪಟ್ಟಣದ ಪುರಸಭಾ ಮೈದಾನದಲ್ಲಿ ತಾಲ್ಲೂಕು ಜೆಡಿಎಸ್ ಪಕ್ಷ ಆಯೋಜಿಸಿದ್ದ ಮತದಾರರಿಗೆ ಕೃತಜÐತೆ ಹಾಗೂ ಕೇಂದ್ರ ಸಚಿವರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನನಗೆ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಜಿಲ್ಲೆಯ ಜನ ಶಕ್ತಿ ನೀಡಿದ್ದಾರೆ. ನಿಮಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಜಿಲ್ಲೆಯ ಜೀವನಾಡಿ ಕೆ.ಆರ್.ಎಸ್ ಸೇರಿದಂತೆ ಕಾವೇರಿ ಕಣಿವೆಯ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಈವರ್ಷವಾದರೂ ಜಿಲ್ಲೆಯ ಜನ ಎರಡು ಬೆಳೆ ಭತ್ತ ಬೆಳೆಯುತ್ತಾರೆಂಬ ಆಸೆಯಿದೆ. ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಸರ್ವ ಪಕ್ಷದ ಸಭೆಗೆ ನಾನು ಹೋಗಲಿಲ್ಲ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಭಾನುವಾರ ಸಭೆ ಕರೆದು ಹಿಂದಿನ ದಿನ ಶನಿವಾರವೇ ಹತ್ತು ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡುತ್ತಾರೆ. ಸಭೆಗೆ ಮುನ್ನ ನೀರು ಬಿಟ್ಟ ಮೇಲೆ ಸಭೆಗೆ ಹೋಗಿ ಸಲಹೆ ಕೊಡುವುದಾದರೂ ಏನು ?. ಎಂದು ಪ್ರಶ್ನಿಸಿದ ಕುಮಾರಣ್ಣ ಕೆಲವರು ಕುಮಾರಣ್ಣ ಬಾಡೂಟಕ್ಕೆ ಹೋಗಿದ್ದರು ಎಂದು ಟೀಕೆ ಮಾಡುತ್ತಾರೆ. ಶುಭಕಾರ್ಯಗಳಲ್ಲಿ ಬಾಡೂಟ ಹಾಕುವುದು ನಮ್ಮ ಸಮುದಾಯದ ಸಂಸ್ಕೃತಿಯ ಒಂದು ಭಾಗ, ನಮ್ಮ ಶಾಸಕರುಗಳು ಯಾರನ್ನೂ ಮೆಚ್ಚಿಸಲು ಬಾಡೂಟ ಹಾಕುತ್ತಿಲ್ಲ ಬದಲಾಗಿ ನಮ್ಮ ಪರಂಪರೆಯ ಒಂದು ಭಾಗವಾಗಿ ಬಾಡೂಟ ಹಾಕುತ್ತಿದ್ದಾರೆ. ಬಾಡೂಟ ನೀವು ನೀಡುವ ಪ್ರೀತಿಗೆ ಕೃತಜ್ಞತೆ ಸಲ್ಲಿಸುವ ಒಂದು ಭಾಗ ಅಷ್ಟಕ್ಕೂ ನಾನು ಆರೋಗ್ಯದ ದೃಷ್ಟಿಯಿಂದ ಕಳೆದ 5-6 ವರ್ಷಗಳಿಂದಲೂ ಬಾಡೂಟದ ಸೇವನೆ ನಿಲ್ಲಿಸಿದ್ದೇನೆ ಎಂದರು. ಕೆಲವರು ಕುಮಾರಣ್ಣ ಕಾವೇರಿ ಪ್ರಾಧಿಕಾರವನ್ನು ಮುಂದಿನ ಐದು ವರ್ಷಗಳಲ್ಲಿ ರದ್ದು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆದು ಅವರ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ನನಗೆ ಅವರ ಸೇವೆಯ ಅಗತ್ಯವಿಲ್ಲ. ಈ ಹಿಂದೆಯೇ ಅವರ ಸೇವೆಯನ್ನು ನಾನು ನೋಡಿದ್ದೇನೆ ಎಂದು ಮಾರ್ಮಿಕವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ರವರನ್ನು ಕುಟುಕಿದ ಕುಮಾರಸ್ವಾಮಿ ನಾನು ಜನರ ಸೇವೆ ಮಾಡುವವನೇ ಹೊರತು ಯಾರಿಂದಲೂ ಸೇವೆ ಮಾಡಿಸಿಕೊಳ್ಳುವವನಲ್ಲ ಎಂದರು.
ನಾನು ಲೋಕಸಭೆಗೆ ನಿಲ್ಲುವ ಇಚ್ಛೆ ಇರಲಿಲ್ಲ ಆದರೆ ರಾಜಕೀಯ ಪರಿಸ್ಥಿತಿಗಳು ನನ್ನನ್ನು ನಿಲ್ಲುವಂತೆ ಮಾಡಿತು. ಜಿಲ್ಲೆಯ ಜನ ಕುಮಾರಣ್ಣನಿಂದ ಏನಾದರೂ ಅನುಕೂಲವಾಗಬಹುದು ಎಂದು ಪಕ್ಷಾತೀತವಾಗಿ ಮತ ನೀಡಿದ್ದಾರೆ. ಪ್ರಧಾನಿ ನರೇಂದ್ರಮೋದಿ ನನಗೆ ಎರಡು ಮಹತ್ವದ ಖಾತೆಗಳನ್ನು ನೀಡಿದ್ದಾರೆ. ದೇವೇಗೌಡರ 60 ವರ್ಷಗಳ ರಾಜಕೀಯ ಜೀವನಕ್ಕೆ ಒಕ್ಕಲಿಗ ಸಮಾಜ ಶಕ್ತಿಯಾಗಿ ನಿಂತಿದೆ. ಈ ಭಾಗದ ಜನರಿಗೆ ಕೃತಜ್ಞತಾ ಪೂರ್ವಕವಾಗಿ ಮೋದಿ ನನಗೆ ಎರಡು ಪ್ರಮುಖ ಖಾತೆ ನೀಡಿದ್ದಾರೆ. ನನಗೆ ಸಿಕ್ಕಿರುವ ಸಚಿವ ಸ್ಥಾನ ಈ ಭಾಗದ ಜನರಿಗೆ ಮೋದಿ ನೀಡಿದ ಗೌರವವಾಗಿದೆ ಎಂದರು. ಸಚಿವ ಸ್ಥಾನವಲ್ಲದೇ ದೇಶದ ಆರ್ಥಿಕತೆಯ ನೀತಿಯನ್ನು ಜಾರಿಗೆ ತರುವ ಆರ್ಥಿಕ ಸಮಿತಿಗೂ ಮತ್ತು ನೀತಿ ಆಯೋಗಕ್ಕೂ ನನ್ನನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಇದಕ್ಕೆ ರಾಜ್ಯದ, ಜಿಲ್ಲೆಯ ಜನರ ಆಶೀರ್ವಾದ ಕಾರಣ ಎಂದರು.
ಜಿಲ್ಲೆಯ ಜನ ನನ್ನ ಮೇಲೆ ಅಪಾರ ನಿರೀಕ್ಷೆ ಇಟ್ಟಿದ್ದಾರೆ. ಅವರ ನಿರೀಕ್ಷೆಯನ್ನು ಈಡೇರಿಸಲು ನಾನು ಬದ್ದ. ಆದರೆ ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕು. ರಾಜ್ಯದ ಪ್ರತಿಷ್ಠಿತ ಭದ್ರಾವತಿ ಮತ್ತು ಉಕ್ಕಿನ ಕಾರ್ಖಾನೆ, ದೇಶದ ಅತ್ಯಂತ ಪ್ರತಿಷ್ಠಿತವಾಗಿದ್ದ ಹೆಚ್.ಎಂ.ಟಿ ಕಾರ್ಖಾನೆ ಸ್ಥಗಿತಗೊಂಡಿವೆ. ಇವುಗಳ ಪುನಶ್ಚೇತನಕ್ಕೆ ಈಗಾಗಲೇ ಪ್ರಯತ್ನ ಆರಂಭಿಸಿದ್ದೇನೆ. ದೇಶದ ಯುವಕರಿಗೆ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ನಾನು ಕೆಲಸ ಮಾಡುತ್ತಿದ್ದೇನೆ. ಸಚಿವನಾಗಿ ಒಂದೂವರೆ ತಿಂಗಳಾಗಿದ್ದು ಅಷ್ಟರಲ್ಲಿಯೇ ಕುಮಾರಸ್ವಾಮಿ ಕರ್ನಾಟಕಕ್ಕೆ ಏಕೆ ಬರುತ್ತಾನೆ, ಮಂಡ್ಯ ಜಿಲ್ಲೆಗೆ ಏಕೆ ಬರುತ್ತಾನೆ ಎಂದು ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ. ನಾನು ಜಿಲ್ಲೆಯಲ್ಲಿ ಜನತಾ ದರ್ಶನ ನಡೆಸಿದರೆ ಅದಕ್ಕೆ ಅಧಿಕಾರಿಗಳು ಹೋಗಬಾರದೆಂದು ಸೂಚಿಸುತ್ತಾರೆ. ಕೇಂದ್ರ ಸಚಿವರಿಗೆ ಜನತಾ ದರ್ಶನ ನಡೆಸಲು ಅಧಿಕಾರ ಇಲ್ಲ ಎನ್ನುತ್ತಾರೆ. ಕುಮಾರಣ್ಣ ಜನತಾ ದರ್ಶನ ಮಾಡಬಾರದು. ಅವರಿಗೆ ಯಾವುದೇ ಅಧಿಕಾರ ಇಲ್ಲ ಎನ್ನುವವರು ವಿಧಾನಸೌಧದ ಸರ್ವಪಕ್ಷದ ಸಭೆಗೆ ನನ್ನನ್ನು ಏಕಾದರೂ ಕರೆದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿಗಾಗಿ ಜಿಲ್ಲೆಯ ಜನ ರಕ್ತ ಹರಿಸಿದ್ದಾರೆ. ಇದು ನನಗೆ ಅರಿವಿದೆ. ಒಕ್ಕೂಟ ವ್ಯವಸ್ಥೆ ಮತ್ತು ನ್ಯಾಯಾಧೀಕರಣ ವ್ಯವಸ್ಥೆಯಲ್ಲಿ ಯಾವ ರೀತಿ ಜಿಲ್ಲೆಯ ರೈತರಿಗೆ ಅನುಕೂಲ ಮಾಡಬಹುದು ಎಂದು ಯೋಚಿಸುತ್ತಿದ್ದೇನೆ. ಜಿಲ್ಲೆಯ ಜನರ ಆಶೀರ್ವಾದ ಹಾಗೂ ದೇವೇಗೌಡರ ಮಾರ್ಗದರ್ಶನದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಜೆಡಿಎಸ್ ಮುಗಿಸಿದ್ದೇನೆ ಎನ್ನುವವರಿಗೆ ಜಿಲ್ಲೆಯ ಜನ ಉತ್ತರಿಸಿದ್ದಾರೆ. ನನಗೆ ಯಾವುದೇ ವೈಯಕ್ತಿಕ ಆಸೆ ಆಕಾಂಕ್ಷೆಗಳಿಲ್ಲ. ಜನರ ಆಶೀರ್ವಾದದಿಂದ ಜೆಡಿಎಸ್ ಪುನಶ್ಚೇತನವಾಗಿರುವುದು ಕಾಂಗ್ರೆಸ್ಸಿಗರಲ್ಲಿ ನಿದ್ದೆಗೆಡಿಸಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಗುಡ್ಡಗಳು ಕುಸಿದು ಹಲವಾರು ಜನ ಜೀವ ಕಳೆದುಕೊಂಡಿದ್ದಾರೆ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದರು, ದೇವೇಗೌಡರು ಮುಖ್ಯಮಂತ್ರಿಯಾದರು, ಸದಾನಂದಗೌಡರು, ಕುಮಾರಸ್ವಾಮಿ ಯವರು ಮುಖ್ಯಮಂತ್ರಿಯಾದರು. ನನಗೂ ಒಂದು ಅವಕಾಶ ಕೊಡಿ. ನನ್ನ ಕೈಗೆ ಒಂದು ಬಾರಿ ಪೆನ್ನು, ಪೇಪರ್ ಕೊಡಿ ಎನ್ನುತ್ತಿದ್ದ ವ್ಯಕ್ತಿ ಇದುವರೆವಿಗೂ ಗುಡ್ಡಕುಸಿದವರ ಕಡೆಗೆ ತಿರುಗಿ ನೋಡಿಲ್ಲ. ಎಂದು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದ ಕುಮಾರಣ್ಣ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡದ ಸಿಎಂ ಸಿದ್ದರಾಮಯ್ಯನವರ ನಡೆಯನ್ನು ಖಂಡಿಸಿದರು. ಕುಮಾರಣ್ಣ ರಾಜ್ಯಕ್ಕೆ ಏಕೆ ಬಂದ ಎಂದು ಕೇಳುವವರಿಗೆ ಜನರ ಕಷ್ಟಸುಖ ಕೇಳುವ ಮನಸ್ಥಿತಿ ಬೇಡವೇ ? ಎಂದ ಕುಮಾರಣ್ಣ ರಾಜ್ಯದಲ್ಲಿ ಎಸಿ/ಎಸ್ಟಿ ಕುಟುಂಬದ ಅಭಿವೃದ್ದಿಗೆ ಮೀಸಲಿಟ್ಟಿದ್ದ ಹಣವನ್ನೇ ದೋಚುವ ಸರ್ಕಾರ ಅಧಿಕಾರದಲ್ಲಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ಆಗಿಲ್ಲ ಕೇವಲ 94 ಕೋಟಿ ಅವ್ಯವಹಾರ ಆಗಿದೆ ಎಂದು ಸ್ವತ: ಮುಖ್ಯಮಂತ್ರಿ ಹೇಳುತ್ತಾರೆ. 94 ಕೋಟಿ ಕದ್ದರೆ ಅದು ಕಳ್ಳತನ ಅಲ್ಲವೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. ಕಳೆದ 8-9 ತಿಂಗಳಿನಿಂದ ಹಾಲು ಉತ್ಪಾದಕರಿಗೆ ನೀಡಬೇಕಾದ 900 ಕೋಟಿ ಹಣವನ್ನು ರೈತರಿಗೆ ನೀಡಿಲ್ಲ. ಹಾಲು ಖರೀದಿ ದರವನ್ನು ಹೆಚ್ಚಿಸಿದ ಸರ್ಕಾರ ಹಾಲು ಉತ್ಪಾದಕರಿಗೆ ಮಾತ್ರ ಹಾಲಿನ ಹಣ ನೀಡುತ್ತಿಲ್ಲ. ನಮ್ಮ ಕಾಲದಲ್ಲಿ ರೈತರು ಟಿಸಿ ಹಾಕಿಸಿಕೊಳ್ಳಲು 25000 ಸಾಕಾಗಿತ್ತು. ಆದರೆ ಈಗ ಎರಡೂವರೆ ಲಕ್ಷ ಕೊಡಬೇಕಾಗಿದೆ. ಪೆಟ್ರೋಲ್, ಡೀಸೆಲ್, ಬಡವರು ಸೇವಿಸುವ ಮದ್ಯ, ಆಸ್ತಿ ನೊಂದಣಿ ಸೇರಿದಂತೆ ಎಲ್ಲಾ ಹಂತದಲ್ಲಿಯೂ ಬೆಲೆ ಏರಿಕೆಯಾಗಿದೆ. ಎಷ್ಟು ದಿನ ನೀವು ನಿಮ್ಮ ಗ್ಯಾರಂಟಿ ನೀಡುತ್ತೀರಿ, ಖಜಾನೆ ಖಾಲಿಯಾದ ಮೇಲೆ ನಿಮ್ಮ ಗ್ಯಾರಂಟಿ ಯೋಜನೆಗೆ ಎಲ್ಲಿಂದ ಹಣ ತರುತ್ತೀರಿ. ನಾನು ಸಿಎಂ ಆಗಿದ್ದಾಗ ನಾಡಿನ ತಾಯಂದಿರ ಅಪೇಕ್ಷೆಯ ಮೇರೆಗೆ ಸಾರಾಯಿ, ಮತ್ತು ಲಾಟರಿಗಳನ್ನು ನಿಷೇಧೀಸಿದ್ದೆ. ಈಗ ಶಾಸಕರಾಗಿರುವವರು ಮಟ್ಕ, ಜೂಜು ಆಡಿಸಿಕೊಂಡು ಸಮಾಜವನ್ನು ಹಾಳುಮಾಡುತ್ತಿದ್ದಾರೆ. ಜನರ ತೆರಿಗೆಯ ಹಣ ಲೂಟಿಯಾಗುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಆಗುತ್ತಿಲ್ಲ. ಹಣ ಲೂಟಿ ಮಾಡಲು ಸಚಿವರುಗಳ ನಡುವೆ ಪೈಪೆÇೀಟಿ ನಡೆಯುತ್ತಿದೆ. ಬಿಜೆಪಿ ಕಾಲದ 21 ಹಗರಣಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಈಗ ಹೇಳುತ್ತಿದ್ದಾರೆ. ಈ ಹಿಂದೆ ಅವರೇ ಸಿಎಂ ಆಗಿದ್ದರಲ್ಲ ಆಗ ಏಕೆ ತನಿಖೆ ಮಾಡಿಸಲಿಲ್ಲ. ಎಸ್.ಎಂ.ಕೃಷ್ಣ ಅಧಿಕಾರದ ಅವಧಿಯಲ್ಲಿನ ಅರ್ಕಾವತಿ ಬಡಾವಣೆಯನ್ನು ರೀಡೂ ಹೆಸರಿನಲ್ಲಿ ಡಿನೋಟಿಫಿಕೇಷನ್ ಹೆಸರಿನಲ್ಲಿ ದೊಡ್ಡದೊಡ್ಡ ಕುಳಗಳಿಗೆ ಹಂಚಿದ್ದಾರೆ. ನೈಸ್ ಕಂಪನಿಯ ಹಗಲು ದರೋಡೆಯ ಬಗ್ಗೆ ಕಾಂಗ್ರೆಸ್ಸಿಗರೇ ಆದ ಟಿ.ಬಿ.ಜಯಚಂದ್ರ ನೀಡಿದ್ದ ವರದಿಯನ್ನು ಸರ್ಕಾರ ಕಸದ ಬುಟ್ಟಿಗೆ ಹಾಕಿದೆ. ಭ್ರಷ್ಟರ ಕೈಲ್ಲಿ ಆಡಳಿತ ಇದೆ ಎಂದು ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.