ನಗರೀಕರಣ ಮತ್ತು ಕೈಗಾರಿಕರಣ ಪರಿಸರ ನಾಶಕ್ಕೆ ಕಾರಣ
ಕಲಬುರಗಿ:ಜು.21: ನಗರೀಕರಣ ಮತ್ತು ಕೈಗಾರಿಕರಣ ಪರಿಸರ ನಾಶಕ್ಕೆ ಪ್ರಮುಖ ಕಾರಣವಾಗಿದೆ ಎಂದು ಸಹಾಯನ ಎನ್‍ಜಿಓ ನ ಕಾರ್ಯಕ್ರಮಗಳ ಮುಖ್ಯಸ್ಥ ಇಳಂಗೋ ಸ್ಟಾನಿಸ್ಲಾಸ್ ಅಭಿಪ್ರಾಯಪಟ್ಟರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ರವಿವಾರ ಮಹಾವಿದ್ಯಾಲಯ ಮತ್ತು ಸಂವಾದ ಯುವ ಸಂಪನ್ಮೂಲ ಕೇಂದ್ರ ಕಲಬುರ್ಗಿ ಜಂಟಿಯಾಗಿ ಆಯೋಜಿಸಿದ ಒಂದು ದಿನದ ಶಿಬಿರ “ಪರಿಸರಕ್ಕಾಗಿ ಯುವ ಧ್ವನಿ ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನಾವು ಪರಿಸರ ಸಂರಕ್ಷಣೆಗಾಗಿ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಲುಷಿತ ನೀರಿನ ಪರಿಣಾಮ ಮೊದಲು ಮಹಿಳೆ ಮತ್ತು ಚಿಕ್ಕ ಮಕ್ಕಳ ಮೇಲೆ ಆಗುತ್ತದೆ. ಇತ್ತೀಚೆಗೆ ಕಲುಷಿತ ನೀರಿನಿಂದಾಗಿ ಅನಾರೋಗ್ಯಕ್ಕೆ ಇಡಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಾಗರಿಕತೆಗಳು ಆರಂಭವಾಗಿದ್ದು ನದಿ ಮುಖಜ ಭೂಮಿಯಲ್ಲಿ, ಆದರೆ ಆವಾಗ ಶುದ್ಧವಾಗಿದ್ದ ನದಿಗಳು ಇವಾಗ ಕಲುಷಿತಗೊಂಡಿದೆ. ನಾಗರಿಕತೆ ಆರಂಭವಾದಾಗ ನದಿಯ ನೀರನ್ನು ನೇರವಾಗಿ ಜನರು ಕುಡಿಯಲು ಬಳಸುತ್ತಿದ್ದರು. ಆದರೆ ಈಗ ನದಿಯ ನೀರನ್ನು ನೇರವಾಗಿ ಬಳಸಲು ಸಾಧ್ಯವಾಗುತ್ತಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ಪರಿಸರ ಉಳಿಸುವುದು ಇಂದಿನ ಯುವಕ ಆದ್ಯ ಕರ್ತವ್ಯವಾಗಿದೆ. ಪರಿಸರ ಚೆನ್ನಾಗಿದ್ದರೆ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದರು. ವೇದಿಕೆ ಮೇಲೆ ಪ್ರಾಧ್ಯಾಪಕರಾದ ಡಾ.ಸೀಮಾ ಪಾಟೀಲ, ಶ್ರೀಮತಿ ದೀಶಾ ಮೆಹತಾ, ಶ್ರೀಮತಿ ಕಲ್ಪನಾ ಇದ್ದರು ಮತ್ತಿತರರು ಇದ್ದರು.
ಕಾರ್ಯಕ್ರಮವನ್ನು ಸಂವಾದ ಯುವ ಸಂಪನ್ಮೂಲ ಕೇಂದ್ರ ಕಲಬುರ್ಗಿ ಅಧಿಕಾರಿ ನಾಗೇಶ ಸ್ವಾಗತಿಸಿ ಮತ್ತು ನಿರೂಪಿಸಿದರು. ದಿಲ್‍ಶಾದ್ ಪ್ರಾಸ್ತಾವಿಕ ಮಾತನಾಡಿದರು. ಸಂವಾದ ಯುವ ಸಂಪನ್ಮೂಲ ಕೇಂದ್ರದಿಂದ ಮಹಾವಿದ್ಯಾಲಯದಲ್ಲಿ ನೂರು ಗಿಡಗಳನ್ನು ನೀಡಲಾಯಿತು.