ಮಹದಾಯಿ ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹ

ನವಲಗುಂದ, ಜು 21: ನಾಲ್ಕು ದಶಕಗಳ ರೈತರ ಹೋರಾಟಕ್ಕೆ ನ್ಯಾಯ ಸಿಗಬೇಕಾದರೆ ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆ ಜಾರಿಯಾಗಲೆಬೇಕೆಂದು ಉತ್ತರ ಕರ್ನಾಟಕ ಪರಿವರ್ತನ ಸಮುದಾಯದ ಅಧ್ಯಕ್ಷ ಮಾಬುಸಾಬ ಯರಗುಪ್ಪಿ ಆಗ್ರಹ ಮಾಡಿದರು.
1980 ರಲ್ಲಿ ನೀರಿನ ಕರದ ವಿರುದ್ದ ಹೋರಾಟ ಮಾಡಿ ಹುತಾತ್ಮರಾದ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿನ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ರೈತರ ಹೆಸರು ಹೇಳಿಕೊಂಡು ಅಧಿಕಾರ ಅನುಭವಿಸುತ್ತಿದ್ದಾರೆ. ಆದರೆ ರೈತರ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಭ್ರಷ್ಟ ರಾಜಕಾರಣಿಗಳ ಮೋಸದಾಟಕ್ಕೆ ಇಲ್ಲಿಯವರೆಗೆ ಈ ಭಾಗದಲ್ಲಿ ಮಹದಾಯಿ ಹಾಗೂ ಕಳಸಾ-ಬಂಡೂರಿ ನೀರು ಹರಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನಸ್ವಾಮಿ ಮಠಪತಿ, ಶಿವಲಿಂಗಯ್ಯ ಹಿರೇಮಠ, ರಿಯಾಜಅಹ್ಮದ ನಾಶಿಪುಡಿ, ಕರಿಯಪ್ಪ ಹರ್ಲಿ, ರಾಜು ಗದಗಿನ, ರವಿ ತೋಟದ, ಅಲ್ಲಾಭಕ್ಷ ಮುಲ್ಲಾ, ಬಾಬುಶ್ಯಾ ಮಕಾಂದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.