ಕಾಯಕದ ಶ್ರೇಷ್ಠತೆ ಸಾರಿದ ಅಪ್ರತಿಮ ಶರಣ ಹಡಪದ ಅಪ್ಪಣ್ಣ
ಕಲಬುರಗಿ :ಜು.21: ಭಕ್ತಿ, ಶೃದ್ಧೆ, ಕಾಯಕವೆಂಬ ಮೌಲ್ಯಗಳಿಂದ ತಮ್ಮದೇ ಆದ ಸಮಾಜ ಸೇವೆಯನ್ನು ಸಲ್ಲಿಸಿದ ಶರಣ ಹಡಪದ ಅಪ್ಪಣ್ಣನವರು ಅಪ್ರತಿಮ ಕಾಯಕಯೋಗಿದ್ದಾರೆ. ಬಸವಣ್ಣನವರಿಗೆ ಆಪ್ತರಾಗಿ ಇಡೀ ಜೀವನದುದ್ದಕ್ಕೂ ಸಮಾಜ ಸೇವೆ ಮಾಡಿದ್ದಾರೆ.ಕಾಯಕದಲ್ಲಿ ಮೇಲು-ಕೀಳು ಸಲ್ಲದೆಂದು ಕಾಯಕಕ್ಕೆ ದೈವತ್ವದ ಸ್ಥಾನವನ್ನು ದೊರಕಿಸಿಕೊಡಲು ಅಪ್ಪಣ್ಣನವರ ಕೊಡುಗೆ ಅವಿಸ್ಮರಣೀಯವಾಗಿದೆಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ಶರಣ ಹದಪಡ ಅಪ್ಪಣ್ನವರ 890ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಅಪ್ಪಣ್ಣ ಶರಣರು ‘ಬಸವಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ ಅಂಕಿತನಾಮದೊಂದಿಗೆ ರಚಿಸಿದ 243 ವಚನಗಳು ಲಭ್ಯವಾಗಿದ್ದು, ತಮ್ಮ ವಚನಗಳ ಮೂಲಕ ಸಮಾಜದಲ್ಲಿ ತುಂಬಿರುವ ಮೂಢ ನಂಬಿಕೆ, ಕಂದಾಚಾರ, ಅಂದಶೃದ್ದೆ, ಸಾಮಾಜಿಕ ಪಿಡುಗುಗಳನ್ನು ಖಂಡಿಸಿದ್ದಾರೆ. ಅವರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ ಮಾತನಾಡಿ, ಬಸವಣ್ಣನವರು ವಿಶ್ವದ ಪ್ರಥಮ ಸಂಸತ್ತು ಎಂದೆನಿಸಿಕೊಳ್ಳುವ ‘ಅನುಭವ ಮಂಟಪ’ವನ್ನು ಸ್ಥಾಪಿಸಿ, ಎಲ್ಲಾ ಧರ್ಮ, ಜಾತಿ, ಜನಾಂಗದವರನ್ನು ಒಂದೆಡೆ ಸೇರಿಸಿ, ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ, ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕರಾದ ಚಂದ್ರಲೇಖಾ ಎಸ್.ಪೂರ್ಮಕರ್, ಶಿಲ್ಪಾ ಎಸ್.ಖೇಡ್, ಪ್ರಿಯಾಂಕಾ ಪಿ.ಕುಲಕರ್ಣಿ, ಪ್ರೀತಿ ಜೆ.ಬಿರಾದಾರ, ಪೂರ್ಣಿಮಾ ಸಿ.ಪಾಟೀಲ, ಖಮರುನನೀಸ್ ಶೇಖ್, ಸರಸ್ವತಿ ಎಂ.ಬಿರಾದಾರ, ಮಲ್ಲಮ್ಮ ಬಿ.ಕೋಣಿನ್, ವರ್ಷಾರಾಣಿ ಪಾಟೀಲ, ರೋಹಿತ್ ಯೆರಪುಲ್, ಕಾಶಮ್ಮ ಚಿನ್ಮಳ್ಳಿ, ಸೇವಕಿಯರಾದ ಸುನಿತಾ, ನಾಗಮ್ಮ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.