ಗುರುಪೂರ್ಣಿಮಾ-ಬಾಬಾಗೆ ವಿಶೇಷ ಅಲಂಕಾರ
ಕೋಲಾರ,ಜು,೨೧- ಗುರು ಪೂರ್ಣಿಮಾ ಅಂಗವಾಗಿ ಜು.೨೧ ರ ಭಾನುವಾರ ನಗರದ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಹಿನ್ನಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ೨೦ ಸಾವಿರಕ್ಕೂ ಹೆಚ್ಚು ಮಂದಿ ಬಾಬಾ ದರ್ಶನಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಅಷ್ಟೂ ಮಂದಿಗೂ ಪ್ರಸಾದಕ್ಕಾಗಿ ಸಿಹಿ ಹಬ್ಬದೂಟದ ವ್ಯವಸ್ಥೆಯ ಸಿದ್ದತೆಗಳು ಭರದಿಂದ ಸಾಗಿವೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ರೈಲ್ವೆ ನಿಲ್ದಾಣದ ಮುಂಭಾಗದ ಆವರಣದಲ್ಲಿ ಸಿದ್ದತೆಗಳನ್ನು ಪರಿಶೀಲಿಸಿ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಲೋಕಕಲ್ಯಾಣಕ್ಕಾಗಿ ಹಾಗೂ ಬಾಬಾರ ಮೊರೆ ಹೋಗುತ್ತಿದ್ದೇವೆ ಎಂದರು.
ಜತೆಗೆ ಬೆಳಗ್ಗೆ ೧೦-೩೦ ಗಂಟೆಯಿಂದ ಸಂಜೆ ೪ ಗಂಟೆಯವರೆಗೂ ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾಧಿಗಳಿಗೆ ರೈಲ್ವೆ ನಿಲ್ದಾಣದ ಮೈದಾನದಲ್ಲಿ ಹಾಕಿರುವ ಬೃಹತ್ ಶಾಮಿಯಾನಾದಡಿ ಹಬ್ಬದ ಊಟದ ಪ್ರಸಾದವನ್ನು ಬಫೆ ಮಾದರಿ ಬಡಿಸಲು ೧೦೦ ಮಂದಿ ಅಡುಗೆ ಸಿಬ್ಬಂದಿ ಸಿದ್ದತೆ ನಡೆಸಿದ್ದಾರೆ ಎಂದ ಅವರು, ಭಕ್ತಾಧಿಗಳಿಗೆ ಪಲಾವ್, ಮೊಸರನ್ನ, ಲಡ್ಡು, ಬೋಂಡಾ, ಅನ್ನರಸ,ಪಲ್ಯ ಸೇರಿದಂತೆ ಹಬ್ಬದಡಿಗೆಗೆ ಸಿದ್ದತೆ ನಡೆದಿದೆ ಎಂದರು.
ಬಾಬಾ ದರ್ಶನ ಹಾಗೂ ಪೂಜಾ ಕೈಂಕರ್ಯಗಳಿಗೆ ಅಡಚಣೆಯಾಗದಂತೆ ಸಿದ್ದತೆಗಳನ್ನು ಕೈಗೊಳ್ಳುತ್ತಿದ್ದು, ಊಟದ ವ್ಯವಸ್ಥೆಗಾಗಿ ಬಾಬಾ ಮಂದಿರಕ್ಕೆ ಹೊಂದಿಕೊಂಡಂತಿರುವ ರೈಲ್ವೆ ನಿಲ್ದಾಣದ ಮುಂದಿನ ಮೈದಾನವನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿ ಬೃಹತ್ ಪೆಂಡಾಲ್ ಮಾಡಲಾಗಿದೆ.
ಸ್ವಾಮಿಯ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಶುದ್ದ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ, ಬಾಬಾ ಭಕ್ತ ಮಂಡಳಿಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಸ್ತುವಾರಿ ವಹಿಸಿ ಭಕ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ಊಟ ಸಿದ್ದತೆ ಹಾಗೂ ಬಡಿಸಲು ೧೦೦ ಮಂದಿ ಅಡುಗೆಯವರು ಕೆಲಸ ಮಾಡಲಿದ್ದು, ಬರುವ ಎಲ್ಲಾ ಭಕ್ತಾಧಿಗಳಿಗೆ ಸಂಭ್ರಮದ ಭೋಜನಕ್ಕೆ ರೈಲ್ವೆ ನಿಲ್ದಾಣದ ಮುಂಭಾಗದ ಆವರಣದಲ್ಲಿ ಸಿದ್ದತೆ ಭರದಿಂದ ಸಾಗಿದೆ.
ಮುಖಂಡ ನಂದಿನಿ ನಾರಾಯಣಸ್ವಾಮಿ ಮತ್ತಿತರ ದಾನಿಗಳ ನೆರವಿನಿಂದ ಬಾಬಾ ಮೂರ್ತಿಗೆ ಹಾಗೂ ಇಡೀ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತಿದ್ದು, ಭಕ್ತಾಧಿಗಳಿಗೆ ಮಂದಿರ ಮುಂಜಾನೆಯಿಂದಲೇ ತೆರೆದಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಯೂನಿಯನ್ ನಿರ್ದೇಶಕ ಅಣ್ಣಿಹಳ್ಳಿ ನಾಗರಾಜ್,ಬಣಕಹಳ್ಳಿ ನಟರಾಜ್,ಸಿ.ಆರ್.ಶೇಖರ್, ಭಾಸ್ಕರ್ ಅಡಿಗ, ಕಳ್ಳಿಪುರ ಜಗದೀಶ್ ಮತ್ತಿತರರು ಹಾಜರಿದ್ದರು.