ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಿ:ಡಾ.ಪವಾರ
ಭಾಲ್ಕಿ:ಜು.21:ಕಲುಷಿತ ವಾತಾವರಣ ತಿಳಿಗೊಳಿಸಬೇಕಾದರೆ ಬಯಲು ಪ್ರದೇಶದಲ್ಲಿ ವಿವಿಧ ನಮೂನೆಯ ಸಸಿಗಳು ನೆಡುವುದರ ಮೂಲಕ ಪರಿಸರ ಜಾಗೃತಿ ಮೂಡಿಸಬೇಕು ಎಂದು ಕಲ್ಯಾಣ ಝೋನ್ ಐಪಿಎಜಿ ಆದ ಮಕ್ಕಳ ತಜ್ಞ ಡಾ.ವಸಂತ ಪವಾರ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಕೃಪಾ ಕಲ್ಯಾಣ ಮಂಟಪದ ಆವರಣದಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್‍ನವರು ಹಮ್ಮಿಕೊಂಡ ವನಮಹೋತ್ಸವಕ್ಕೆ ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇತ್ತೀಚೆಗೆ ಅತಿ ವೇಗವಾಗಿ ಹರಡುವ ಮಾರಕ ಕಾಯಿಲೆಗಳಾದ ಡೆಂಗಿ,ಚಿಕನಗುನ್ಯಾ ನಿಯಂತ್ರಿಸಲು ಮನೆ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲ್ಯಾಣ ಝೋನ್ ಮಾಜಿ ಡಾ.ಅಮೀತ ಅಷ್ಟೂರೆ ಮಾತನಾಡಿ,ಅರಣ್ಯ ಪ್ರದೇಶದ ನಾಶದಿಂದ ಆಮ್ಲಜನಕದ ಕೊರತೆ ಕಾಡುತ್ತಿದೆ.ಕಾರಣ ಮರ ಬೆಳೆಸಿ ಕಾಡು ಉಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು.ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್‍ನ ಅಧ್ಯಕ್ಷ ಡಾ.ವಿಲಾಸ ಕನಸೆ ಮಾತನಾಡಿ,ಪ್ರಕೃತಿ ಸೌಂದರ್ಯ ಕಾಪಾಡಲು ಬೆಳೆದ ಗಿಡ-ಮರಗಳ ಪೋಷಣೆ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದರು.
ನ್ಯಾಯವಾದಿ ಉಮಾಕಾಂತ ವಾರದ ಅವರು,ಗಿಡಗಳ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಟರಿಯನರಾದ ಡಾ.ಯುವರಾಜ ಜಾಧವ,ಡಾ.ಅನೀಲ ಸುಕಾಳೆ,ಸಂಜೀವಕುಮಾರ ಪಂಡರಗೆರೆ,ಡಾ.ಶ್ರೀರಂಗ ಬಿರಾದಾರ,ಡಾ.ಸಜ್ಜಲ ಬಳತೆ,ಡಾ.ಗುಂಡೆರಾವ ಶೆಡೋಳೆ,ದತ್ತುಕುಮಾರ ಮೆಹಕ್ರೆ,ಪ್ರಾಚಾರ್ಯ ಅಶೋಕ ರಾಜೋಳೆ,ವಿಶ್ರಾಂತ ಎಎಸ್‍ಐ ಚಂದ್ರಕಾಂತ ಥಮಕೆ ಸೇರಿದಂತೆ ಇತರರಿದ್ದರು