ಮುಡಾ ಹಗರಣ: ಬಿಜೆಪಿಯಿಂದ ಮೂಲ ಮಾಲೀಕರ ಭೇಟಿ
ಸಂಜೆವಾಣಿ ನ್ಯೂಸ್
ಮೈಸೂರು:ಜು.21:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಬಹುಕೋಟಿ ಹಗರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ನಾಯಕರು, ಈ ಸಂಬಂಧ ಹೋರಾಟವನ್ನು ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಕುಟುಂಬಕ್ಕೆ ಜಮೀನು ಮಾರಾಟ ಮಾಡಿದ್ದರು ಎನ್ನಲಾದ ಮೂಲ ಮಾಲೀಕರ ಕುಟುಂಬಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಮಾಜಿ ಸಚಿವ ಎನ್.ಮಹೇಶ್ ನೇತೃತ್ವದಲ್ಲಿ ಮೈಸೂರಿನ ಗಾಂಧಿನಗರದಲ್ಲಿರುವ ಮಲ್ಲಯ್ಯ ಅವರ ನಿವಾಸಕ್ಕೆ ಶನಿವಾರ ಬೇಟಿ ನೀಡಿದ ಬಿಜೆಪಿ ಮುಖಂಡರು, ಜಮೀನು ಮಾರಾಟ ವಿಚಾರದ ಕುರಿತಂತೆ ಜಮೀನಿನ ಮೂಲ ಮಾಲೀಕ ದಿ. ಜವರನ ಮೊಮ್ಮಗ ಜವರಯ್ಯ, ಆತನ ಪತ್ನಿ ಪುಷ್ಪ ಹಾಗೂ ಮಗ ದರ್ಶನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ಬಿಜೆಪಿ ನಿಯೋಗದ ಸದಸ್ಯರ ಎದುರು ತಮ್ಮ ಅಳಲು ತೋಡಿಕೊಂಡ ಕುಟುಂಬಸ್ಥರು, ತಮ್ಮ ಕುಟುಂಬಕ್ಕೆ ದೇವರಾಜು ಮೋಸ ಮಾಡಿ ಆಸ್ತಿ ಮಾರಾಟ ಮಾಡಿದ್ದು, ಈ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಇದರಿಂದಾಗಿ ನಮಗೆ ಅನ್ಯಾಯವಾಗಿದ್ದು, ನ್ಯಾಯ ಕೊಡಿಸಿಕೊಡುವಂತೆ ಮನವಿ ಮಾಡಿಕೊಂಡರು. ಕುಟುಂಬಸ್ಥರ ಸಮಸ್ಯೆ ಆಲಿಸಿದ ಬಿಜೆಪಿ ನಾಯಕರು, ಮನವಿ ಪತ್ರಕ್ಕೆ ಸಹಿ ಹಾಕಿಸಿಕೊಂಡು, ನ್ಯಾಯ ಕೊಡಿಸುವ ಭರವಸೆ ನೀಡಿದರು.
ಈ ಕುರಿತಂತೆ ಮಾತನಾಡಿದ ಮಾಜಿ ಸಚಿವ ಎನ್. ಮಹೇಶ್, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಕುಟುಂಬಸ್ಥರು ಖರೀದಿಸಿದ್ದಾರೆ ಎನ್ನಲಾಗಿರುವ ಸದರಿ ಜಮೀನು ಜವರ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಜವರನಿಗೆ ಮಲ್ಲಯ್ಯ, ಮೈಲಾರಯ್ಯ ಹಾಗೂ ದೇವರಾಜು ಎಂಬ ಮೂವರು ಮಕ್ಕಳಿದ್ದು, ಇವರಲ್ಲಿ ಸದರಿ ಜಮೀನನ್ನು ದೇವರಾಜ ಒಬ್ಬನೇ ಮಾರಾಟ ಮಾಡಿದ್ದಾರೆ. ಆದರೆ ಇದರಲ್ಲಿ ಆತನ ಸಹೋದರರಾದ ಮಲ್ಲಯ್ಯ ಮತ್ತು ಮೈಲಾರಯ್ಯ ಅವರಿಗೂ ಪಾಲು ಸಿಗಬೇಕಿತ್ತು.
ಈ ನಿಟ್ಟಿನಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಕುಟುಂಬಸ್ಥರು ಮನವಿ ಕೊಟ್ಟಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳಿಗೂ ಮನವಿ ನೀಡಿ ಎಂದಿದ್ದೇನೆ ಎಂದರು.
ದೇವರಾಜು ಜಮೀನು ಮಾರಾಟ ಮಾಡುವಾಗ ಜಮೀನಿನ ಇತರೆ ವಾರಸ್ಥದಾರರ ಮಲ್ಲಯ್ಯ ಮತ್ತು ಮೈಲಾರಯ್ಯ ಸಹಿ ಹಾಗೂ ಒಪ್ಪಿಗೆ ಪಡೆಯಬೇಕಿತ್ತು. ಆದರೆ ಇದಾವುದನ್ನೂ ಮಾಡದೆ, ಒಬ್ಬನೇ ಜಮೀನಿನ ಲಾಭ ಪಡೆದುಕೊಂಡಿದ್ದಾನೆ. ಆದ್ದರಿಂದ ಉಳಿದ ಇಬ್ಬರಿಗೂ ಪಾಲು ದೊರೆಯಬೇಕು ಎಂಬುದು ನಮ್ಮ ವಾದ. ಅಲ್ಲದೇ ದಲಿತರ ಜಮೀನನ್ನು ಸಿದ್ದರಾಮಯ್ಯ ಖರೀದಿ ಮಾಡಬಾರದು ಎಂದೇನಿಲ್ಲ, ಆದರೆ ಸ್ವಯಾರ್ಜಿತ ಆಸ್ತಿಯನ್ನು ಖರೀದಿ ಮಾಡಬಹುದಾಗಿದೆ ಎಂದ ಅವರು, ಮುಡಾ ಹಗರಣದ ಕುರಿತಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಆದರೆ ಈ ತನಿಖೆಯನ್ನು ಸಿಬಿಐ ಮೂಲಕ ನಡೆಯಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಎಸ್.ಟಿ ಮೋರ್ಚಾ ರಾಜ್ಯಾಧ್ಯಕ್ಷ ಕೌಟಿಲ್ಯ ರಘು ಇನ್ನಿತರರು ಇದ್ದರು.