ನೀರನ್ನು ಮಿತವಾಗಿ ಬಳಸಿ: ಮಂಜುಳಾ ಕಿವಿಮಾತು
ಆನೇಕಲ್. ಜು. ೨೧- ಮಾನವನು ತನ್ನ ದಿನನಿತ್ಯದ ಜೀವನದಲ್ಲಿ ನೀರನ್ನು ಬಳಸುವುದು ಅನಿವಾರ್ಯವಾಗಿದೆ ಆದರೆ ನೀರನ್ನು ಅತಿಯಾಗಿ ಬಳಸುವುದು, ಪೋಲುಮಾಡುವುದರಿಂದ ಮುಂದಿನ ಪೀಳಿಗೆಗೆ ಜಲ ಸಂಕಷ್ಟ ಎದುರಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಸಹ ನೀರಿನ ಮಿತ ಬಳಕೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡು ಮುಂದಿನ ಪೀಳಿಗೆಗೆ ಜೀವ ಜಲ ಕೊಡುಗೆಯಾಗಿ ನೀಡಿ ಎಂದು ಚಂದಾಪುರ ಪುರಸಭೆಯ ಮಾಜಿ ಸದಸ್ಯರಾದ ಶ್ರೀಮತಿ ಮಂಜುಳ ನೀಲಕಂಠಯ್ಯ ಕರೆ ನೀಡಿದರು.
ಅವರು ಚಂದಾಪುರದ ಶ್ರೀ ಶಾರದಾಶ್ರಮದಲ್ಲಿ ಬೆಂಗಳೂರು ಜೆಎಸ್‌ಎಸ್ ಜನ ಶಿಕ್ಷಣ ಸಂಸ್ಥೆ ಹಾಗೂ ಪೃಥ್ವಿ ಫೌಂಡೇಷನ್ ಚಂದಾಪುರ ಸಹಯೋಗದಲ್ಲಿ ನೀರಿನ ನಿರ್ವಹಣೆ ಕುರಿತು ಉಪನ್ಯಾಸ ಮತ್ತು ೨೦೨೩-೨೪ ನೇ ಸಾಲಿನ ತರಬೇತಿ ಪಡೆದ ಕಲಿಕಾರ್ಥಿಗಳಿಗೆ ಭಾರತ ಸರ್ಕಾರದ ಪ್ರಮಾಣ ಪತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದರು.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ.ಚಂದ್ರಶೇಖರ್ ರವರು ಮಾತನಾಡಿ ಇಂದು ಅನೇಕ ರಾಷ್ಟ್ರಗಳು ಜಲ ಕ್ಷಾಮದಿಂದ ಬಳಲುತ್ತಿದ್ದು. ಭಾರತವು ಅತೀ ಹೆಚ್ಚು ಜನಸಂದಣಿಯನ್ನು ಹೊಂದಿದ್ದು ಪ್ರತಿದಿನ ಲಕ್ಷಾಂತರ ಕ್ಯೂಸೆಕ್ ನೀರನ್ನು ಬಳಸುತ್ತಿದ್ದೇವೆ. ನೀರನ್ನು ಹಿತವಾಗಿ, ಮಿತವಾಗಿ, ಅಗತ್ಯಕ್ಕನುಸಾರವಾಗಿ ಬಳಸುವಂತೆ ತಿಳಿಸಿದರು . ಮುಂದುವರೆದು ಬೆಂಗಳೂರಿನ ಜೆಎಸ್‌ಎಸ್ ಜನ ಶಿಕ್ಷಣ ಸಂಸ್ಥೆ ವತಿಯಿಂದ ಅನೇಕ ತರಬೇತಿಗಳನ್ನು ಪಡೆದವರು ಸ್ವಾವಲಂಭಿಗಳಾಗಿ ಬದುಕು ಕಟ್ಟಿಕೊಂಡಿರುವುದು ಶ್ಲಾಘನೀಯ ವಿಚಾರವೆಂದರು.
ಬೆಂಗಳೂರಿನ ಜೆಎಸ್ ಎಸ್ ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಡಿ.ಎಂ. ಶಶಿಕಲಾ ರವರು ಮಾತನಾಡಿ ಈ ಸಂಸ್ಥೆಯು ಭಾರತ ಸರ್ಕಾರದ ಪ್ರಾಯೋಜಕತ್ವದ ಕೌಶಾಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ವರ್ಷ ಜುಲೈ ೧೫ ರಿಂದ ೩೧ ರವರೆಗೆ ಪಾಕ್ಷಿಕ ಕಾರ್ಯಕ್ರಮವಾಗಿ ಸ್ವಚ್ಛತಾಪಕವಾಡ ಆಚರಿಸುತ್ತಿದ್ದು. ಪ್ರತಿಜ್ಞಾವಿಧಿ ಸ್ವೀಕಾರ, ನೀರಿನ ನಿರ್ವಹಣೆ, ವೈಯಕ್ತಿಕ ಸ್ವಚ್ಛತೆ ಮತ್ತು ನೈರ್ಮಲ್ಯ, ಶೌಚಾಲಯಗಳ ಬಳಕೆ, ಪ್ಲಾಸ್ಟಿಕ್ ಬಳಕೆ ಮಿತಗೊಳಿಸುವುದು, ಎರೆಹುಳು ಗೊಬ್ಬರದ ಬಗ್ಗೆ ಉಪನ್ಯಾಸ, ಘೋಷವಾಕ್ಯ ಬರವಣಿಗೆ, ಶ್ರಮದಾನ ಮುಂತಾದ ಚಟುವಟಿಕೆಗಳನ್ನು ಬೆಂಗಳೂರಿನ ನಗರ ಜಿಲ್ಲೆಯಾದ್ಯಂತ ವಿವಿಧ ಸ್ಥಳಗಳಲ್ಲಿ ನಡೆಸಲಾಗುತ್ತಿದೆ ಎಂದರು. ಸುಮಾರು ೧೦೦ ಫಲಾನುಭವಿಗಳಿಗೆ ಪ್ರಮಾಣ ಪತ್ರಗಳನ್ನು ಗಣ್ಯರು ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾರದಾಶ್ರಮದ ಮಾತಾ ರಮಾಪ್ರಿಯಾಂಭ. ಪೃಥ್ವಿ ಫೌಂಡೇಶನ್ ಸ್ಥಾಪಕರಾದ ಶ್ರೀಮತಿ ಭಾನುಮತಿ, ಸಿಆರ್‌ಪಿ ರಾಘವೇಂದ್ರ, ಶಿಕ್ಷಕರಾದ ಪ್ರಶಾಂತ್, ಜನ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಅಶೋಕ್. ಸಹಾಯಕ ಕಾರ್ಯಕ್ರಮಾಧಿಕಾರಿ ರವಿ. ಕ್ಷೇತ್ರ ಸಹಾಯಕರಾದ ಶ್ರೀಮತಿ ಅರುಣ. ಎಸ್‌ಎಸ್,ವೃತ್ತಿ ಬೋಧಕರಾದ ಶ್ರೀಮತಿ ಹೇಮಾವತಿ, ಸಿಬ್ಬಂದಿಯಾದ ಶ್ರೀಮತಿ ರೇಖಾ ರವರು ಬಾಗವಹಿಸಿದ್ದರು.